Belagavi

ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪ್ರಕೃತಿ ವಿಕೋಪ ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆ

Share

ಬೆಳಗಾವಿ ಮಹಾನಗರ ಸೇರಿದಂತೆ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಮುಂಜಾಗ್ರತಾ ಕ್ರಮಗಳ ಮೂಲಕ ಶಾಶ್ವತ ಪರಿಹಾರ ಸಿಕ್ಕಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಕೃತಿ ವಿಕೋಪ ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಮುಂದಿನ 5 ರಿಂದ 7 ದಿನಗಳ ಕಾಲ ಮಳೆಯಾದರೆ ಮುಂದಿನ 4-5 ತಿಂಗಳಿಗಾಗುವಷ್ಟು ನೀರು ಸಂಗ್ರಹವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಇಂದು ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪ್ರಕೃತಿ ವಿಕೋಪ ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರು, ರಾಕಸಕೊಪ್ಪ ಜಲಾಶಯದಲ್ಲಿ ಸದ್ಯ 0.04 ಟಿಎಂಸಿ ನೀರಿದ್ದು, ದಿನದಿಂದ ದಿನಕ್ಕೆ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇದೇ ರೀತಿ ಇನ್ನು ಮೂರು ದಿನ ಮಳೆ ಮುಂದುವರಿದರೆ ನೀರಿನ ಪ್ರಮಾಣ 1 ರಿಂದ 1.5 ಅಡಿಯಷ್ಟು ಹೆಚ್ಚಾಗಲಿದೆ. ಸದ್ಯ ರೇಶನಿಂಗ್ ಪದ್ಧತಿಯಡಿ ನಗರದ ಎಲ್ಲಾ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಎಲ್‌ಆಂಡ್‌ಟಿ ಇಂಜಿನಿಯರ್‌ಗಳು ಇಡೀ ನಗರವನ್ನು ಒಟ್ಟು 33 ಝೋನ್ ಆಗಿ ವಿಂಗಡಿಸಿದ್ದು, ಇದರಲ್ಲಿ 6 ಝೋನ್‌ಗಳು ಪೂರ್ಣಪ್ರಮಾಣದಲ್ಲಿ ಹಾಗೂ 27 ಝೋನ್‌ಗಳು ಭಾಗಶಃ ಕಾರ್ಯನಿರ್ವಹಿಸುತ್ತಿವೆ. ಸದ್ಯ ಭಾಗಶಃ ಸಕ್ರಿಯವಾಗಿರುವ ವಲಯಗಳಲ್ಲಿ ಪ್ರತಿ 8 ದಿನಗಳಿಗೊಮ್ಮೆ ಸರದಿಯಂತೆ ನೀರು ಪೂರೈಸಲಾಗುತ್ತಿದೆ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ., ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜಲಾಶಯದಲ್ಲಿ ನೀರಿನ ಲಭ್ಯತೆ 0.0078 ಟಿಎಂಸಿ ತಲುಪಿದ್ದು, ಮಳೆ ಬರದಿದ್ದರೂ ಜುಲೈ 25 ರವರೆಗೆ ಕುಡಿಯುವ ನೀರನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ ಎಂದು ಅಂಕಿ-ಅಂಶ ನೀಡಿದರು.

ಇದೇ ವೇಳೆ ನಗರದಲ್ಲಿ ನೀರು ಸರಬರಾಜು ಸ್ಥಗಿತಗೊಳಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳಿಗೆ ಕಡ್ಡಾಯವಾಗಿ ಮುನ್ಸೂಚನೆ ನೀಡಬೇಕು ಎಂದು ಶಾಸಕ ಆಸೀಫ್ ಸೇಠ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕಳೆದ ಬಾರಿ ಕೇವಲ ಮೂರು ದಿನಗಳ ಕಾಲ ಶಟ್‌ಡೌನ್ ಮಾಡಿದಾಗ, ಸಮರ್ಪಕ ಮಾಹಿತಿ ಇಲ್ಲದ ಕಾರಣ ನಗರದ ಜನತೆಗೆ ಬರೋಬ್ಬರಿ 15 ದಿನಗಳ ಕಾಲ ನೀರು ಪೂರೈಕೆಯಾಗದೆ ತೀವ್ರ ಸಮಸ್ಯೆಯಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಮುಂಚಿತವಾಗಿ ಮಾಹಿತಿ ನೀಡಿದ್ದರೆ ಸಾರ್ವಜನಿಕರು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದರು ಎಂದು ನೆನಪಿಸಿದ ಶಾಸಕರು, ಮುಂದಿನ ದಿನಗಳಲ್ಲಿ ಇಂತಹ ಬೇಜವಾಬ್ದಾರಿತನ ಹಾಗೂ ಲೋಪದೋಷಗಳು ಮರುಕಳಿಸದಂತೆ ತೀವ್ರ ಜಾಗ್ರತೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಕಡಕ್ ನಿರ್ದೇಶನ ನೀಡಿದರು.

ಸಚಿವ ಸತೀಶ್ ಜಾರಕಿಹೊಳಿ ಅವರು, ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಮೊದಲೇ ಕಟ್ಟುನಿಟ್ಟಿನ ಮುಂಜಾಗ್ರತೆ ವಹಿಸಲಾಗಿತ್ತು ಮತ್ತು ಕನಿಷ್ಠ 2 ತಿಂಗಳಿಗಾಗುವಷ್ಟು ನೀರನ್ನು ಸಂಗ್ರಹಿಸಿಡಲಾಗಿತ್ತು. ಇದೀಗ ವರುಣನ ಕೃಪೆಯಿಂದಾಗಿ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ರಾಕಸಕೊಪ್ಪ ಸೇರಿದಂತೆ ಪ್ರಮುಖ ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. ಹೀಗಾಗಿ ಬೆಳಗಾವಿ ಮಹಾನಗರದ ನೀರಿನ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಕ್ಕಂತಾಗಿದ್ದು, ಮಹಾನಗರ ಪಾಲಿಕೆ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿವೆ ಎಂದರು.

ಇದೇ ವೇಳೆ ಸಭೆಯಲ್ಲಿ ಜಿಲ್ಲೆಯ ಬೆಳೆ ಹಾನಿ ಹಾಗೂ ಆಸ್ತಿಪಾಸ್ತಿ ಹಾನಿ ಕುರಿತು ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಸೇರಿದಂತೆ ಇನ್ನುಳಿದ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ಧರು.

Tags:

error: Content is protected !!