Belagavi

ಬೆಳಗಾವಿ: ಮತದಾರರ ಪಟ್ಟಿ ಪರಿಷ್ಕರಣೆಗೆ ಡಿಸಿ ಗಡುವು; ಭಾನುವಾರ ರಾತ್ರಿಯೊಳಗೆ 100% ಫಾರ್ಮ್ ವಿತರಣೆಗೆ ಕಟ್ಟುನಿಟ್ಟಿನ ಆದೇಶ!

Share

ಬೆಳಗಾವಿ ಜಿಲ್ಲೆಯಲ್ಲಿ ಮತದಾರರ ಚೀಟಿ ವಿತರಣೆ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಭಾನುವಾರ ರಾತ್ರಿಯ ಡೆಡ್‌ಲೈನ್ ವಿಧಿಸಿದ್ದಾರೆ. ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳಿಗೆ ಕಡಕ್ ಎಚ್ಚರಿಕೆ ನೀಡಿದ್ದು, ವಾರಾಂತ್ಯದಲ್ಲಿ ಕಡ್ಡಾಯವಾಗಿ ಫೀಲ್ಡ್‌ನಲ್ಲಿದ್ದು ಕೆಲಸ ಮುಗಿಸುವಂತೆ ಆದೇಶಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಡಿಜಿಟಲೀಕರಣ ಪ್ರಕ್ರಿಯೆಯನ್ನು ಅತ್ಯಂತ ಶೀಘ್ರವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರಿಗಳಿಗೆ ಕಠಿಣ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 41 ಲಕ್ಷದ 7 ಸಾವಿರ ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸುವ ಗುರಿ ಹೊಂದಲಾಗಿದ್ದು, ಕೇವಲ ನಾಲ್ಕೈದು ದಿನಗಳಲ್ಲಿ 11,99,757 (ಶೇ. 29.21) ಫಾರ್ಮ್‌ಗಳನ್ನು ವಿತರಿಸಲಾಗಿದೆ. ಸದ್ಯ ಜಿಲ್ಲೆಯ ಒಟ್ಟಾರೆ ಪ್ರಗತಿ ಶೇಕಡಾ 30 ರಷ್ಟಿದ್ದು, ಭಾನುವಾರ ರಾತ್ರಿಯ ಒಳಗಾಗಿ ಬಾಕಿ ಇರುವ ಎಲ್ಲಾ ಫಾರ್ಮ್‌ಗಳ ವಿತರಣೆಯನ್ನು ನೂರಕ್ಕೆ ನೂರರಷ್ಟು ಮುಗಿಸಲೇಬೇಕು ಎಂದು ಬಿಎಲ್‌ಒ (BLO) ಮತ್ತು ಮೇಲ್ವಿಚಾರಕರಿಗೆ ಜಿಲ್ಲಾಧಿಕಾರಿಗಳು ಅಂತಿಮ ಗಡುವು ವಿಧಿಸಿದ್ದಾರೆ.

ಕ್ಷೇತ್ರವಾರು ಪ್ರಗತಿ ಪರಿಶೀಲಿಸಿದ ಡಿಸಿ, ಯಮನಮರಡಿಯಲ್ಲಿ ಶೇ. 37.78 ಹಾಗೂ ಕುಡಚಿ-ಸದಲಗಾದಲ್ಲಿ 53,686 ಫಾರ್ಮ್ ವಿತರಣೆಯಾಗಿರುವುದು ಉತ್ತಮವಾಗಿದೆ ಎಂದರು. ಆದರೆ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕೇವಲ 45,000 ಪ್ರಗತಿಯಾಗಿದ್ದು, ನಿಪ್ಪಾಣಿಯಲ್ಲಿ ಶೇ. 31, ಅಥಣಿಯಲ್ಲಿ ಶೇ. 26 ಹಾಗೂ ಕಾಗವಾಡದಲ್ಲಿ ಶೇ. 22.23 ರಷ್ಟು ಮಾತ್ರ ಸಾಧನೆಯಾಗಿದೆ. ಪ್ರಗತಿ ಕುಂಠಿತವಾಗಿರುವ ಕ್ಷೇತ್ರಗಳ ಬಿಎಲ್‌ಒಗಳು ಶನಿವಾರ ಮತ್ತು ಭಾನುವಾರ ಕಡ್ಡಾಯವಾಗಿ ಫೀಲ್ಡ್‌ನಲ್ಲಿದ್ದು ಆ್ಯಪ್‌ನಲ್ಲಿ ವಿವರಗಳನ್ನು ಅಪ್‌ಡೇಟ್ ಮಾಡಬೇಕು. ಯಾವುದೇ ಬಿಎಲ್‌ಒ ತಮಗೆ ಡಿಜಿಟಲೀಕರಣ ಗೊತ್ತಿಲ್ಲ ಎಂದು ನೆಪ ಹೇಳುವಂತಿಲ್ಲ; ಸಮಸ್ಯೆ ಇದ್ದಲ್ಲಿ ತಕ್ಷಣವೇ ಸೂಪರ್‌ವೈಸರ್‌ಗಳ ಜೊತೆ ಸಮನ್ವಯ ಸಾಧಿಸಿ ಕೆಲಸ ಮುಗಿಸಬೇಕು ಎಂದು ಡಿಸಿ ಎಚ್ಚರಿಸಿದ್ದಾರೆ.

Tags:

error: Content is protected !!