ಬೆಳಗಾವಿ-ಕಿತ್ತೂರು-ಧಾರವಾಡ ನೂತನ ರೈಲ್ವೆ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಈಗ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಫಲವತ್ತಾದ ಭೂಮಿ ಕಳೆದುಕೊಳ್ಳುತ್ತಿರುವ ತಮಗೆ ಪ್ರಸ್ತುತ ಮಾರುಕಟ್ಟೆ ದರಕ್ಕಿಂತ ಅತ್ಯಂತ ಕಡಿಮೆ ಪರಿಹಾರ ನಿಗದಿಪಡಿಸಲಾಗಿದೆ ಎಂದು ಆರೋಪಿಸಿರುವ ಸಂತ್ರಸ್ತ ರೈತರು, ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಪ್ರಮುಖ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರ ಸಲ್ಲಿಸಿದ್ದಾರೆ.

ಬೆಳಗಾವಿ-ಕಿತ್ತೂರು ಭಾಗದ ನೂತನ ರೈಲ್ವೆ ಮಾರ್ಗದ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಪ್ರಸ್ತುತ ಕೇವಲ 35 ರಿಂದ 45 ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸಿ ನೋಟಿಸ್ ಜಾರಿಗೊಳಿಸಲಾಗಿದೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಎಕರೆಗೆ 2 ರಿಂದ 3 ಕೋಟಿ ರೂಪಾಯಿ ಬೆಲೆ ಇರುವುದರಿಂದ, ಈ ಕನಿಷ್ಠ ಪರಿಹಾರದಿಂದ ರೈತರು ಬೀದಿಪಾಲಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ, ಭೂಮಿ ಕಳೆದುಕೊಳ್ಳುವ ರೈತ ಕುಟುಂಬದ ಸದಸ್ಯರಿಗೆ ರೈಲ್ವೆ ಇಲಾಖೆಯಲ್ಲಿ ಸರ್ಕಾರಿ ನೌಕರಿ ನೀಡಬೇಕು, ಹೆಚ್ಚಿನ ಪರಿಹಾರ ಧನ ಒದಗಿಸಬೇಕು ಹಾಗೂ ದಾಖಲೆಗಳ ಹೊಂದಾಣಿಕೆಯ ವೆಚ್ಚವನ್ನು ಇಲಾಖೆಯೇ ಭರಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಪಾಟೀಲ್, ಶಶಿಧರ ರೊಟ್ಟಿ, ಬಸವರಾಜ್ ಕಡೇಮನಿ, ಗೌಸಮೋದಿನ ಜಾಲಿಕೊಪ್ಪ, ಶಿವರುದ್ರ ಅರಳಿಕಟ್ಟಿ, ಸುರೇಶ್ ಗುರವಣ್ಣವರ ಸೇರಿದಂತೆ ಇನ್ನುಳಿದ ರೈತ ಮುಖಂಡರು ಭಾಗಿಯಾಗಿದ್ದರು.
