ರಾಜ್ಯ ಚುನಾವಣಾ ಆಯೋಗ ನಡೆಸುತ್ತಿರುವ ಎಸ್ಐಆರ್ ದಾಖಲೆಯನ್ನು ಮರಾಠಿ ಭಾಷೆಯಲ್ಲಿ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಎಂಇಎಸ್ ಸಂಘಟನೆ ಪ್ರತಿಭಟನೆ ನಡೆಸಿ ಮಹಾಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.


ಕರ್ನಾಟಕ ಸರಕಾರ ಬೆಳಗಾವಿಯಲ್ಲಿನ ಮರಾಠಿ ಭಾಷಿಕರಿಗೆ ಅನ್ಯಾಯ ಮಾಡುತ್ತಿದೆ. ಮತದಾನದ ವಂಚಿತ ಮಾಡುವ ಹುನ್ನಾರ ರಾಜ್ಯ ಸರಕಾರ ನಡೆಸಿದೆ ಎಂದು ಎಂಇಎಸ್ ಆರೋಪಿಸಿದೆ. ಬೆಳಗಾವಿ ಉತ್ತರ, ದಕ್ಷಿಣ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿ ಭಾಷಿಕರಿದ್ದಾರೆ. ಆದರೆ ಕನ್ನಡದಲ್ಲಿ ದಾಖಲೆ ಇರುವುದರಿಂದ ನಮಗೆ ಯಾವ ಮಾಹಿತಿಯೂ ತಿಳಿಯುತ್ತಿಲ್ಲ. ಮನೆ ಮನೆಗೆ ಬರುವ ಬಿಎಲ್ಓಗಳಿಗೆ ಮರಾಠಿ ಭಾಷೆಯಲ್ಲಿ ದಾಖಲೆ ನೀಡುವಂತೆ ಜಿಲ್ಲಾ ಚುನಾವಣಾ ಆಯೋಗ ಸೂಚನೆ ನೀಡಬೇಕು. ಅಲ್ಲಿಯವರೆಗೆ ಎಸ್ಐಆರ್ ಸಮೀಕ್ಷೆ ತಡೆ ಹಿಡಿಯಬೇಕೆಂದು ಎಂಇಎಸ್ ಸಂಘಟನೆಯ ಅಧ್ಯಕ್ಷ ಪ್ರಕಾಶ ಮರಗಾಳೆ ಅವರು ಆಗ್ರಹಿಸಿದರು.
ಇನ್ನು ಅಡ್ವೋಕೇಟ್ ಅಮರ್ ಯಳ್ಳೂರಕರ ಅವರು ಮರಾಠಿ ಭಾಷಿಕ ಮತದಾರರ ಹೆಸರುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 15 ರಿಂದ 18 ಸಾವಿರ ನಕಲಿ ಮತಗಳನ್ನು ಸೃಷ್ಟಿಸಲಾಗಿದೆ ಎಂದು ಅಡ್ವೊಕೇಟ್ ಅಮರ್ ಯೆಳ್ಳೂರಕರ್ ಆರೋಪಿಸಿದ್ದಾರೆ. ಈ ನಕಲಿ ಮತದಾನವನ್ನು ತಡೆಯಲು ಬೆಳಗಾವಿ ಉತ್ತರ, ದಕ್ಷಿಣ ಮತ್ತು ಗ್ರಾಮೀಣ ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಮರಾಠಿ ಭಾಷೆಯಲ್ಲಿ ಅರ್ಜಿ ನಮೂನೆಗಳು ಲಭ್ಯವಾಗುವವರೆಗೆ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಹಾಗೂ ವಾರ್ಡ್ಗಳ ಸಂಖ್ಯೆ ಬದಲಾವಣೆಯ ನೆಪದಲ್ಲಿ ಮರಾಠಿ ಮತದಾರರ ಹೆಸರುಗಳನ್ನು ಕೈಬಿಡಲಾಗುತ್ತಿರುವುದರಿಂದ, ಪರಿಶೀಲನೆಗಾಗಿ 2002ರ ಮತದಾರರ ಪಟ್ಟಿಯನ್ನು ಒದಗಿಸಬೇಕು ಎಂದು ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾಪಾಲಿಕೆ ಮಾಜಿ ಮಹಾಪೌರರಾದ ಶಿವಾಜಿರಾವ್ ಸುಂಠಕರ, ರೇಣು ಕಿಲ್ಲೇಕರ್, ಸರೀತಾ ಪಾಟೀಲ್, ಪಂಢರಿ ಪರಬ್, ರಣಜೀತ್ ಚವ್ಹಾಣ್ ಪಾಟೀಲ್, ಮದನ್ ಬಾಮಣೆ, ಯುವ ಸಮಿತಿಯ ಅಂಕುಶ್ ಕೇಸರಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
