ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಮನೆ ಬಿಟ್ಟು ಹೋಗಿ ಕಳೆದ ಹಲವು ವರ್ಷಗಳಿಂದ ಕಾಣೆಯಾಗಿದ್ದ ವ್ಯಕ್ತಿಗಳನ್ನು ಪತ್ತೆಹಚ್ಚಲು ಎಐ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು, ಕಳೆದ 10 ವರ್ಷಗಳಲ್ಲಿ ಕಾಣೆಯಾಗಿದ್ದ 12 ಮಂದಿಯನ್ನು ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬ ಕಲಹ, ವೈಯಕ್ತಿಕ ಗಲಾಟೆಗಳು ಹಾಗೂ ಇತರೆ ಕಾರಣಗಳಿಂದ ಮನೆ ತೊರೆದು ಹೋಗಿದ್ದವರ ಪತ್ತೆಗೆ ಸಾಂಪ್ರದಾಯಿಕ ವಿಧಾನಗಳ ಜೊತೆಗೆ ಈಗ ಎಐ ತಂತ್ರಜ್ಞಾನವೂ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಕಾಣೆಯಾಗಿದ್ದವರ ಫೋಟೋಗಳನ್ನು ಡಿಜಿಟಲ್ ಡೇಟಾಬೇಸ್ಗೆ ಸೇರಿಸಿ, ದೇಶದ ವಿವಿಧ ಭಾಗಗಳಲ್ಲಿ ಅವರು ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭಗಳಲ್ಲಿ ಆ ಮಾಹಿತಿಯನ್ನು ಹೋಲಿಕೆ ಮಾಡುವ ಮೂಲಕ ಸುಳಿವು ಪತ್ತೆ ಮಾಡಲಾಗುತ್ತಿದೆ ಎಂದರು.
ಈ ತಂತ್ರಜ್ಞಾನದ ಸಹಾಯದಿಂದ ಬೆಳಗಾವಿಯಿಂದ ಕಾಣೆಯಾಗಿದ್ದ ಕೆಲವರು ಗುಜರಾತ್, ಉತ್ತರ ಪ್ರದೇಶದ ರಾಜ್ಯಗಳಲ್ಲಿ ಪತ್ತೆಯಾಗಿದ್ದಾರೆ. ಹೊಸದಾಗಿ ಸರ್ಕಾರಿ ದಾಖಲೆಗಳಿಗೆ ಅರ್ಜಿ ಸಲ್ಲಿಸಿದಾಗ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಅವರನ್ನು ಸಂಪರ್ಕಿಸಿ, ಸುರಕ್ಷಿತವಾಗಿ ಕುಟುಂಬದವರಿಗೆ ಮರಳಿ ಸೇರಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
