ಬೆಳಗಾವಿ ಗ್ರಾಮೀಣ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ತಯಾರಿಕೆಯಲ್ಲಿ ಭಾರಿ ಅಕ್ರಮ ಮತ್ತು ಗೊಂದಲ ನಡೆದಿದೆ ಎಂದು ಬೆಳಗಾವಿ ಗ್ರಾಮೀಣ ಬಿಜೆಪಿ ಮಾಜಿ ಅಧ್ಯಕ್ಷ ಧನಂಜಯ್ ಜಾಧವ್ ಆರೋಪಿಸಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಧನಂಜಯ್ ಜಾಧವ್, ಮತದಾರರ ಪಟ್ಟಿಗೆ ಹೊಸ ಹೆಸರುಗಳನ್ನು ಸೇರಿಸುವಾಗ ಬಿಎಲ್‌ಒಗಳು (BLO) ಮನೆ ಮನೆಗೆ ತೆರಳಿ ಸರಿಯಾದ ಸಮೀಕ್ಷೆ ನಡೆಸಿಲ್ಲ. ಬದಲಿಗೆ ಮನೆಯಲ್ಲೇ ಕುಳಿತು ಕಾಪಿ-ಪೇಸ್ಟ್ ಮಾಡಿ ಮಾಹಿತಿ ದಾಖಲಿಸಿದ್ದಾರೆ. ಇದರಿಂದಾಗಿ ಮದುವೆಯಾಗಿ ಬಂದ ಮಹಿಳೆಯರ ತಂದೆಯ ಹೆಸರಿನ ಜಾಗದಲ್ಲಿ ಗಂಡನ ತಂದೆಯ ಹೆಸರು ದಾಖಲಾಗಿ, ಗಂಡ-ಹೆಂಡತಿ ಅಣ್ಣ-ತಂಗಿಯರಂತೆ ಬಿಂಬಿತವಾಗುವಂತಹ ಭಾರಿ ಗೊಂದಲಗಳು ಸೃಷ್ಟಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು, ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ನಿರ್ದಿಷ್ಟ ಧಾರ್ಮಿಕ ಸಂಸ್ಥೆಯೊಂದರ ಕಚೇರಿಯಲ್ಲಿ ಕುಳಿತು ಬಿಎಲ್‌ಒಗಳಿಂದ ಒಟಿಪಿ ಪಡೆದು ಆಪ್‌ಗಳ ಮೂಲಕ ಮತದಾರರ ಹೆಸರುಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಈ ಹಿಂದೆ ಡಿಲೀಟ್ ಆಗಿದ್ದ ಹೆಸರುಗಳನ್ನು ಅಕ್ರಮವಾಗಿ ಮರುಸೇರ್ಪಡೆಗೊಳಿಸುವ ದೊಡ್ಡ ಹಗರಣ ನಡೆಯುತ್ತಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದ್ದು, ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಮರು ಮ್ಯಾಪಿಂಗ್ ಮಾಡಬೇಕೆಂದು ಅವರು ಒತ್ತಾಯಿಸಿದರು.
ಈ ವೇಳೆ ಬಿಜೆಪಿ ಗ್ರಾಮೀಣ ಕಾರ್ಯಕರ್ತರು ಭಾಗಿಯಾಗಿದ್ಧರು.
