ಬೆಳಗಾವಿಯಲ್ಲಿ ಇಂದು ರಿಟೇಲ್ ಫಾರ್ಮಸಿ ಮಾಲೀಕರು ತಮ್ಮ ಉಳಿವಿಗಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮಹತ್ವದ ಮನವಿ ಪತ್ರ ಸಲ್ಲಿಸಿರುವ ಪ್ರತಿಭಟನಾಕಾರರು, ತಕ್ಷಣವೇ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲಾ ರಿಟೇಲ್ ಫಾರ್ಮಸಿ ಅಸೋಸಿಯೇಷನ್ (BDRPA) ನೇತೃತ್ವದಲ್ಲಿ ಇಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಘಟನೆಯ ಅಧ್ಯಕ್ಷರಾದ ಬಂಡು ಸದಲಗೆ, ಕಾರ್ಯದರ್ಶಿ ಸುಧೀರ್ ನಂಜನ್ನವರ್ ಹಾಗೂ ಖಜಾಂಚಿ ನಿತಿನ್ ಜಾನ್ವರ್ ಅವರ ಮುಂದಾಳತ್ವದಲ್ಲಿ ನಡೆದ ಈ ಹೋರಾಟದಲ್ಲಿ, ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ರವಾನಿಸಲಾಯಿತು. ಆನ್‌ಲೈನ್ ಔಷಧ ಮಾರಾಟದಿಂದ ಯುವ ಪೀಳಿಗೆಗೆ ಆಗುತ್ತಿರುವ ತೊಂದರೆಗಳು, ನಿಯಮಬಾಹಿರವಾಗಿ ವೈದ್ಯರೇ ನೇರವಾಗಿ ಔಷಧ ವಿತರಿಸುತ್ತಿರುವುದು ಮತ್ತು ಕಾರ್ಪೊರೇಟ್ ಸಂಸ್ಥೆಗಳ ಅನೈತಿಕ ರಿಯಾಯಿತಿಗಳ ವಿರುದ್ಧ ಫಾರ್ಮಸಿ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಈ ಬೃಹತ್ ಪ್ರತಿಭಟನೆಯಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ಪವನ್ ಜೆ. ದೇಸಾಯಿ, ಮಹೇಶ್ ಬೀಳಗಿ, ಅಡ್ವಕೇಟ್ ಮಹೇಶ್‌ಗೌಡ ಪಾಟೀಲ್, ಜಂಟಿ ಕಾರ್ಯದರ್ಶಿ ಶೈಲೇಂದ್ರ ಜೈನ್, ಸಹ-ಖಜಾಂಚಿ ಮಹೇಶ್ ಕಿಲ್ಲೇದಾರ್, ಸಂಘಟನಾ ಕಾರ್ಯದರ್ಶಿ ವಿನೋದ್ ಪಿ. ಕೋಲಿವಾಡ್ ಮತ್ತು ಸಹ-ಸಂಘಟನಾ ಕಾರ್ಯದರ್ಶಿ ಮಹೇಶ್ ಅಂಗೋಲ್ಕರ್ ಭಾಗವಹಿಸಿದ್ದರು. ಇವರೊಂದಿಗೆ ಕಾನೂನು ಸಲಹೆಗಾರ ಭರತೇಶ್ ಕುಪ್ಪಾನಟ್ಟಿ, ನಿರ್ದೇಶಕರುಗಳಾದ ಜಯವಂತ್ ಸಾಳುಂಕೆ, ಸಿದ್ದಣ್ಣ ಮುನ್ನೊಳ್ಳಿ, ವಿಜಯ್ ಸಾಣಿಕೊಪ್ಪ ಹಾಗೂ ವಕ್ತಾರರಾದ ಕ್ರಾಂತಿ ಶಾನಭಾಗ್ ಮತ್ತು ವಿಕ್ರಾಂತ್ ಶಾನಭಾಗ್ ಸೇರಿದಂತೆ ಜಿಲ್ಲೆಯ ನೂರಾರು ಔಷಧ ವ್ಯಾಪಾರಿಗಳು ಧ್ವನಿಗೂಡಿಸಿದರು. ಒಂದು ವೇಳೆ ಸರ್ಕಾರ “ಶೆಡ್ಯೂಲ್ K” ನಿಯಮಕ್ಕೆ ತಿದ್ದುಪಡಿ ತಂದು ತಮ್ಮ ವೃತ್ತಿಯನ್ನು ರಕ್ಷಿಸದಿದ್ದರೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ರಿಟೇಲ್ ಫಾರ್ಮಸಿಗಳ ಪರವಾನಗಿಯನ್ನು ಸಾಮೂಹಿಕವಾಗಿ ಸರ್ಕಾರಕ್ಕೆ ವಾಪಸ್ ಒಪ್ಪಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
