Belagavi

ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ: ಲೋಪ ತಡೆಗೆ ಸೂಚನೆ

Share

ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಮಾಡುತ್ತಿರುವ ತಂತ್ರಗಾರಿಕೆಯನ್ನು ಬಹಿರಂಗಪಡಿಸಿರುವ ಡಾ. ಜಿ. ಪರಮೇಶ್ವರ್ ಅವರು, ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ ಶೀಘ್ರದಲ್ಲೇ ಅಧಿಕಾರ ಹಂಚಿಕೆಯಾಗಬೇಕೆಂಬ ಗಟ್ಟಿ ನಿಲುವನ್ನು ತಳೆದಿದ್ದಾರೆ.

ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯ ಸಾಧಕ-ಬಾಧಕಗಳ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆಗಳು ನಡೆಯುತ್ತಿವೆ ಎಂದು ಡಿಸಿಎಂ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಹಿಂದೆ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಈ ಪ್ರಕ್ರಿಯೆ ಬೀರಿದ ಪರಿಣಾಮ ಹಾಗೂ ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಆದ ತೊಂದರೆಗಳನ್ನು ನಾವೆಲ್ಲರೂ ನೋಡಿದ್ದೇವೆ. ಅದೇ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳಲು ಬಿಜೆಪಿ ಮತ್ತು ಇತರ ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ. ಆದರೆ, ನಮ್ಮ ರಾಜ್ಯದಲ್ಲಿ ಅಂತಹ ಯಾವುದೇ ಲೋಪಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲು ಕೆಪಿಸಿಸಿ ಹಾಗೂ ಡಿಸಿಸಿ ವತಿಯಿಂದ ಈಗಾಗಲೇ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಗುರುತಿನ ಚೀಟಿ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಆಯಾ ಕ್ಷೇತ್ರದ ಬೂತ್ ಮಟ್ಟದ ಬಿಎಲ್‌ಒಗಳ (BLO) ಜೊತೆ ನಿರಂತರ ಸಂಪರ್ಕದಲ್ಲಿರಲು ನಾಯಕರಿಗೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಅನಗತ್ಯವಾಗಿ ಮತದಾರರ ಹೆಸರುಗಳು ಡಿಲೀಟ್ ಆಗದಂತೆ ಜಾಗ್ರತೆ ವಹಿಸಬೇಕು. ಮೆಂಬರ್‌ಶಿಪ್ ಮಾಡಲು ನೀಡಲಾಗಿರುವ 13 ಪ್ಯಾರಾಮೀಟರ್‌ಗಳ ಮಾರ್ಗಸೂಚಿಯನ್ನು ಪಾಲಿಸಬೇಕು. ವಾಸಸ್ಥಳ ದೃಢೀಕರಣ ಪತ್ರ ನೀಡಲು ಡಿಸಿ ಹಾಗೂ ತಹಶೀಲ್ದಾರ್‌ ಅವರಿಗೆ ಇಲಾಖೆಯಿಂದ ಅಧಿಕಾರ ನೀಡಲಾಗಿದ್ದು, ಇದರ ಒಟ್ಟಾರೆ ಉಸ್ತುವಾರಿಯನ್ನು ಬಿಎಲ್‌ಎಗಳು (BLA) ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಪಕ್ಷದ ಕಾರ್ಯಕರ್ತರ ಅಧಿಕಾರ ಹಂಚಿಕೆ ಕುರಿತು ಮಾತನಾಡಿದ ಪರಮೇಶ್ವರ್, ಈ ಹಿಂದೆ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷನಾಗಿ ಇಡೀ ರಾಜ್ಯದಲ್ಲಿ ಸುಮಾರು 800 ಜನರನ್ನು ಗುರುತಿಸಿ ವಿವಿಧ ಸಮಿತಿಗಳ ಸ್ಥಾನಕ್ಕಾಗಿ ಪಟ್ಟಿ ಸಿದ್ಧಪಡಿಸಿ ಅಂದಿನ ಅಧ್ಯಕ್ಷರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಅದು ಜಾರಿಗೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ಹೊಸದಾಗಿ ಮುಖ್ಯಮಂತ್ರಿಗಳು ಹಾಗೂ ಅಧ್ಯಕ್ಷರು ಬಂದಿರುವುದರಿಂದ ಈ ಕುರಿತು ಚರ್ಚೆಗಳು ನಡೆಯುತ್ತಿದ್ದು, ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಆದಷ್ಟು ಶೀಘ್ರವಾಗಿ ಅಧಿಕಾರ ಸಿಗುವಂತಾಗಲು ತಾವು ಮತ್ತೊಮ್ಮೆ ಪ್ರಾಮಾಣಿಕವಾಗಿ ಒತ್ತಾಯಿಸುವುದಾಗಿ ಭರವಸೆ ನೀಡಿದರು.

Tags:

error: Content is protected !!