Uncategorized

ವಿವಾಹಿತೆಯನ್ನ ಓಡಿಸಿಕೊಂಡು ಹೋದ ಆರೋಪ;ಯುವಕನ ಮನೆ ಧ್ವಂಸ !!!! ಹಲ್ಲೆಕೋರರ ಬಂಧನಕ್ಕೆ ವಿಶೇಷ ತಂಡ ರಚಿಸಿದ ನಗರ ಪೊಲೀಸ್ ಆಯುಕ್ತರು..

Share

ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ವಿವಾಹಿತ ಮಹಿಳೆಯನ್ನು ಪ್ರೀತಿಸಿ ಓಡಿಸಿಕೊಂಡು ಹೋದ ಆರೋಪದ ಹಿನ್ನೆಲೆ ಯುವಕನ ಮನೆಯ ಮೇಲೆ ನೂರಾರು ಜನ ದಾಳಿ ನಡೆಸಿ ಮನೆಯಲ್ಲಿ ಇದ್ದ ಸಾಮಗ್ರಿಗಳನ್ನು ಧ್ವಂಸಗೊಳಿಸಿದ ಘಟನೆ ಭಾನುವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾನೂನು ಕೈಗೆ ತೆಗೆದುಕೊಂಡ ಹಲ್ಲೆಕೋರರ ಬಂಧನಕ್ಕೆ ಬೆಳಗಾವಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.

ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದ ಯಲ್ಲಪ್ಪ ನಾಯಕ ಕಳೆದ ಎರಡು ವರ್ಷಗಳಿಂದ ಉದ್ಯಮಭಾಗದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೊಂದಿಗೆ ಪರಿಚಯ ಬೆಳೆದು, ಬಳಿಕ ಸ್ನೇಹ ಪ್ರೀತಿಗೆ ತಿರುಗಿದೆ ಎನ್ನಲಾಗಿದೆ. ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗುತ್ತಿದ್ದಂತೆ, ಕೆಲ ದಿನಗಳಿಂದ ಇಬ್ಬರೂ ಸಂಪರ್ಕದಲ್ಲಿದ್ದು, ಕೊನೆಗೆ ಮಹಿಳೆಯನ್ನು ಯಲ್ಲಪ್ಪ ಓಡಿಸಿಕೊಂಡು ಹೋಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ತಿಳಿದ ಮಹಿಳೆಯ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಕ್ರೋಶಗೊಂಡು, ಯಲ್ಲಪ್ಪನ ಕುಟುಂಬದವರಿಗೆ ಈ ಕುರಿತು ಸಂಪೂರ್ಣ ಮಾಹಿತಿ ಇದೆ ಎಂದು ಆರೋಪಿಸಿ ಭರಮ್ಯಾನಟ್ಟಿ ಗ್ರಾಮಕ್ಕೆ ಆಗಮಿಸಿದ್ದಾರೆ. ಬಳಿಕ ಇಪ್ಪತ್ತಕ್ಕು ಹೆಚ್ಚು ಜನ ಸೇರಿಕೊಂಡು ಯಲ್ಲಪ್ಪನ ಮನೆ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ದಾಳಿಯ ವೇಳೆ ಮನೆಯಲ್ಲಿ ಇದ್ದವರ ಮೇಲೆ ಹಲ್ಲೆ ನಡೆಸಿದ ಗುಂಪು, ಮನೆ ಒಳಗಿದ್ದ ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು ಸೇರಿದಂತೆ ಹಲವು ಸಾಮಗ್ರಿಗಳನ್ನು ಧ್ವಂಸಗೊಳಿಸಿದೆ ಎನ್ನಲಾಗಿದೆ. ಮನೆಯ ಬಾಗಿಲು, ಕಿಟಕಿ ಹಾಗೂ ಇತರೆ ವಸ್ತುಗಳಿಗೆ ಹಾನಿಯಾಗಿದೆ.

ಹಲ್ಲೆಯಷ್ಟೇ ನಡೆಸದೇ, ಮನೆಯ ಪಕ್ಕದಲ್ಲಿ ಕಟ್ಟಿಹಾಕಿದ್ದ ಕುರಿಗಳನ್ನು ಕೂಡ ತೆಗೆದುಕೊಂಡು ಹೋಗಿ ಅಟ್ಟಹಾಸ ಮೆರೆದಿದ್ದಾರೆ ಎಂದು ಯಲ್ಲಪ್ಪನ ಕುಟುಂಬಸ್ಥರು ದೂರಿದ್ದಾರೆ. ಮಹಿಳೆಗೆ ಸುಮಾರು ಒಂದು ವರ್ಷದ ಹಿಂದೆ ಮದುವೆಯಾಗಿತ್ತು ಎನ್ನಲಾಗಿದೆ. ಮದುವೆಯಾದ ಬಳಿಕವೂ ಆಕೆ ಉದ್ಯಮಭಾಗದ ಖಾಸಗಿ ಕಂಪನಿಯಲ್ಲಿ ಕೆಲಸ ಮುಂದುವರಿಸಿದ್ದಳು. ಇದೇ ವೇಳೆ ಯಲ್ಲಪ್ಪನೊಂದಿಗೆ ಆತ್ಮೀಯತೆ ಬೆಳೆದು, ಇಬ್ಬರ ಸಂಬಂಧ ಗಾಢವಾಗಿತ್ತು. ಇನ್ನೊಂದೆಡೆ, ಕಳೆದ ಎರಡು ವರ್ಷಗಳಿಂದ ಯಲ್ಲಪ್ಪ ಭರಮ್ಯಾನಟ್ಟಿಯ ಮನೆಯತ್ತ ಬಂದಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಅವಧಿಯಲ್ಲಿ ಆತ ತನ್ನ ಸಹೋದರಿಯೊಂದಿಗೆ ಹಣಕಾಸಿನ ವಿಚಾರವಾಗಿ ಮಾತ್ರ ಫೋನ್ ಮೂಲಕ ಸಂಪರ್ಕದಲ್ಲಿದ್ದ. ಆದರೆ ತನ್ನ ವೈಯಕ್ತಿಕ ಬದುಕಿನ ಬಗ್ಗೆ ಅಥವಾ ಮಹಿಳೆಯೊಂದಿಗೆ ಇರುವ ಸಂಬಂಧದ ಬಗ್ಗೆ ಕುಟುಂಬ ಸದಸ್ಯರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಮನೆ ಧ್ವಂಸ ಮಾಡಿರುವ ಕುರಿತು ಕುಟುಂಬಸ್ಥರು ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರಿಗೆ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಹಲ್ಲೆಯಲ್ಲಿ ಯಾರಿಗೂ ಜೀವಹಾನಿಯಾಗಿಲ್ಲ. ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಕಾನೂನು ಕೈಯಲ್ಲಿ ತೆಗೆದುಕೊಂಡವರ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

Tags:

error: Content is protected !!