ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕಟ್ಟಿ ಗ್ರಾಮದಲ್ಲಿ ಮಹಿಳಾ ಸ್ವಾವಲಂಬನೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಸಂಜೀವಿನಿ ಮಹಿಳಾ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಮಹಿಳೆಯರ ಆರ್ಥಿಕ ಪ್ರಗತಿಗಾಗಿ ವಿಶೇಷ ‘ವಾರದ ಸಂತೆ’ಗೆ ಅಧಿಕೃತ ಚಾಲನೆ ನೀಡಲಾಗಿದ್ದು, ಸ್ವಸಹಾಯ ಸಂಘಗಳ ಮಹಿಳೆಯರಲ್ಲಿ ಹೊಸ ಭರವಸೆ ಮೂಡಿಸಿದೆ. ಈ ಕುರಿತು ಒಂದು ವಿಶೇಷ ವರದಿ.

ಬೈಲಹೊಂಗಲ ತಾಲೂಕಿನ ಮರಕಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರದ ಸಂತೆಯ ಪ್ರಾರಂಭೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಆಡಳಿತಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಮಾಜಿ ಜನಪ್ರತಿನಿಧಿಗಳು ಹಾಗೂ ಊರಿನ ಹಿರಿಯರು ಜಂಟಿಯಾಗಿ ಈ ನೂತನ ಮಾರುಕಟ್ಟೆ ವ್ಯವಸ್ಥೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ತಾಲೂಕು ವ್ಯವಸ್ಥಾಪಕ ನಾಗನಗೌಡ ಪಾಟೀಲ ಮತ್ತು ವಲಯ ಮೇಲ್ವಿಚಾರಕ ಸಚಿನ್ ಗುರುವಣ್ಣವರ, ಮಹಿಳೆಯರು ಸ್ವಾವಲಂಬಿಗಳಾಗಲು ಈ ಸಂತೆ ಪ್ರಮುಖ ವೇದಿಕೆಯಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳೀಯವಾಗಿ ಸಿಗುವ ಉತ್ಪನ್ನಗಳನ್ನು ಖರೀದಿಸುವ ಮೂಲಕ ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಆಪ್ತ ಸಮಾಲೋಚಕಿ ಕುಮಾರಿ ಗೀತಾ ಅವರು ಮಹಿಳೆಯರಿಗೆ ಉಳಿತಾಯದ ಮಹತ್ವ ಹಾಗೂ ಆರ್ಥಿಕ ಸಾಕ್ಷರತೆಯ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಊರಿನ ಹಿರಿಯರಾದ ಸಿದ್ದಪ್ಪ ಮಾವಿನಕಟ್ಟಿ ಅವರು ಮಾತನಾಡಿ, ಮರಕಟ್ಟಿ ಮತ್ತು ಆಸುಪಾಸಿನ ಗ್ರಾಮಸ್ಥರು ಈ ವಾರದ ಸಂತೆಯನ್ನು ಸದುಪಯೋಗ ಪಡಿಸಿಕೊಂಡು ನಿರಂತರವಾಗಿ ಬೆಂಬಲಿಸಬೇಕು ಎಂದು ವಿನಂತಿಸಿದರು. ಒಟ್ಟಾರೆ, ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸುವ ಹಾಗೂ ಬೆಳೆಯುವ ವಸ್ತುಗಳಿಗೆ ನೇರ ಮಾರುಕಟ್ಟೆ ಕಲ್ಪಿಸುವ ಈ ವಾರದ ಸಂತೆಯ ಉದ್ಘಾಟನಾ ಸಮಾರಂಭದಲ್ಲಿ ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿ, ನೂರಾರು ಗ್ರಾಮೀಣ ಮಹಿಳೆಯರು ಹಾಗೂ ಗ್ರಾಮಸ್ಥರು ಸಡಗರದಿಂದ ಪಾಲ್ಗೊಂಡಿದ್ದರು.
