Uncategorized

ಕೈಕೊಟ್ಟ ವರುಣ… ಟ್ಯಾಂಕರ್ ಮೊರೆ ಹೋದ ರೈತರು; ದುಬಾರಿಯಾದ ಕೃಷಿ, ಒಣಗುವ ಭೀತಿಯಲ್ಲಿ ಬೆಳೆ!

Share

ಜೂನ್ ಮೊದಲ ವಾರದಲ್ಲಿ ಉತ್ತಮವಾಗಿ ಸುರಿದ ಮಳೆ ರೈತರಲ್ಲಿ ಹೊಸ ಭರವಸೆ ಮೂಡಿಸಿತ್ತು. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆಗೆ ವೇಗ ನೀಡಿದ ರೈತರು ಬಿತ್ತನೆ ಕಾರ್ಯವನ್ನು ಪೂರ್ಣಗೊಳಿಸಿದ್ದರು. ಆದರೆ ದಿಢೀರ್ ಮಳೆ ಕೈಕೊಟ್ಟ ಪರಿಣಾಮ, ಈಗ ಹೊಲಗಳಲ್ಲಿ ಹಸಿರಿನ ಬದಲು ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮಳೆಯ ಅಭಾವದಿಂದ ಚಿಗುರುತ್ತಿದ್ದ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದು, ಅವುಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಮೂಲಕ ನೀರುಣಿಸುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಬೀಜ, ಗೊಬ್ಬರ, ಕೂಲಿ ಸೇರಿದಂತೆ ಕೃಷಿ ವೆಚ್ಚ ಹೆಚ್ಚಾಗಿರುವ ಸಂದರ್ಭದಲ್ಲಿ, ಟ್ಯಾಂಕರ್ ನೀರಿಗೂ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿರುವುದು ರೈತರ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಿಸಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ರೈತ ಮಾಣಿಕ್ ಅವಳೇಕರ್ ತಮ್ಮ ಎರಡು ಎಕರೆ ಜಮೀನಿನಲ್ಲಿ ಕ್ಯಾಪ್ಸಿಕಂ ಬೆಳೆ ಬೆಳೆದಿದ್ದಾರೆ. ಆರಂಭದಲ್ಲಿ ಸುರಿದ ಮಳೆಯಿಂದ ಬೆಳೆ ಚೆನ್ನಾಗಿ ಚಿಗುರಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ, ಬೆಳೆ ಒಣಗದಂತೆ ಉಳಿಸಿಕೊಳ್ಳಲು ದುಬಾರಿ ವೆಚ್ಚದಲ್ಲಿ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ.

ಮಳೆ ಅವಲಂಬಿತ ಕೃಷಿ ಮಾಡುವ ರೈತರಿಗೆ ಈ ಪರಿಸ್ಥಿತಿ ದೊಡ್ಡ ಹೊಡೆತವಾಗಿದ್ದು, ಶೀಘ್ರದಲ್ಲೇ ಉತ್ತಮ ಮಳೆಯಾಗಲಿ ಎಂಬ ಪ್ರಾರ್ಥನೆಯೊಂದಿಗೆ ಆಕಾಶದತ್ತ ಚಾತಕ ಪಕ್ಷಿಯಂತೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

Tags:

error: Content is protected !!