ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಗುರುವಾರ ಹಾಗೂ ಕೋರವಾರ ಗ್ರಾಮಗಳಲ್ಲಿ ವಿಂಡ್ ಪವರ್ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂಪನಿಯು ರೈತರಿಗೆ ಮೋಸ ಮಾಡಿ ಭೂಮಿಯನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ದೇವರ ಹಿಪ್ಪರಗಿ ತಾಲೂಕಿನ ಗ್ರಾಮದಲ್ಲಿ ವಿಂಡ್ ಪವರ್ ಯೋಜನೆಗಾಗಿ ಕಂಪನಿಯು ಕೇವಲ ಒಂದು ಎಕರೆ ಭೂಮಿಯನ್ನು ಖರೀದಿಸಿಕೊಂಡು, ಅದರ ಹೆಸರಿನಲ್ಲಿ ಸುಮಾರು ಆರು ಎಕರೆ ಜಮೀನನ್ನು ನಾನ್-ಅಗ್ರಿಕಲ್ಚರ್ (ಎನ್‌ಎ) ಮಾಡಲು ಮುಂದಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಇದರಿಂದ ರೈತರ ಕೃಷಿ ಭೂಮಿಗೆ ಧಕ್ಕೆ ಉಂಟಾಗುತ್ತಿದ್ದು, ತಮ್ಮ ಹಕ್ಕುಗಳಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ವಿಂಡ್ ಪವರ್ ಕಂಪನಿಯ ಕಾರ್ಯ ಚಟುವಟಿಕೆಗಳ ಕುರಿತು ಸಮಗ್ರ ತನಿಖೆ ನಡೆಸಿ, ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದೇ ವೇಳೆ ಕರ್ನಾಟಕ ರೈತ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ್ ಸಗರ ಅವರು ಕೂಡ ಮಾಧ್ಯಮದೊಂದಿಗೆ ಮಾತನಾಡಿ, ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದಲ್ಲಿಯೂ ವಿಂಡ್ ಪವರ್ ಕಂಪನಿಯವರು ರೈತರ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಒಂದು ಎಕರೆ ಭೂಮಿ ಖರೀದಿಸಿ, ಅದರ ಹೆಸರಿನಲ್ಲಿ ಸುಮಾರು ಆರು ಎಕರೆ ಭೂಮಿಯನ್ನು ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದ್ದು, ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ವಿಂಡ್ ಪವರ್ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
