ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಸಂಶಯದ ಭೂತಕ್ಕೆ ಮತ್ತೊಂದು ಬಲಿಯಾಗಿದೆ. ಹೆಂಡತಿಯ ನಡತೆ ಮೇಲೆ ಶಂಕೆ ವ್ಯಕ್ತಪಡಿಸಿ ಪತಿಯೊಬ್ಬ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಂದ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ.ಕೆ. ರಾಮರಾಜನ್ ತಿಳಿಸಿದರು.


ಈ ಕುರಿತು ಬೆಳಗಾವಿಯಲ್ಲಿ ಇಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಎಸ್ಪಿ ಕೆ. ರಾಮರಾಜನ್ ಅವರು ಸಂಪೂರ್ಣ ಮಾಹಿತಿ ನೀಡಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದಗಾಂವ ಗ್ರಾಮದ ಶ್ರೀ ಅವಜೀಕರ ಮಠದಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಶೋಭಾ ಪರಗೊಂಡ ಸಾರವಾಡ (35) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಪರಗೊಂಡ ಸಂಗಪ್ಪ ಸಾರವಾಡ ಎಂಬಾತ ಕಳೆದ ನಾಲ್ಕು ವರ್ಷಗಳಿಂದ ಹೆಂಡತಿಯ ನಡತೆ ಬಗ್ಗೆ ವಿನಾಕಾರಣ ಸಂಶಯ ಪಡುತ್ತಿದ್ದನು. ಹಿರಿಯರು ಹಲವು ಬಾರಿ ಬುದ್ಧಿವಾದ ಹೇಳಿದರೂ ಕೇಳದ ಈತ, ದಿನಾಂಕ 28-06-2026ರ ನಸುಕಿನ ಜಾವ 5 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದ್ದ ಹೆಂಡತಿಯ ಕುತ್ತಿಗೆ ಹಾಗೂ ಕೈಗಳಿಗೆ ಕೊಡಲಿಯಿಂದ ಮನಸೋಇಚ್ಛೆ ಕೊಚ್ಚಿ ಕೊಲೆ ಮಾಡಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಮೃತರ ಸಹೋದರ ಮಹಾಂತೇಶ ಗುರಪ್ಪ ಪಾಟೀಲ ಅವರು ಅಥಣಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ದೂರಿನ ಅನ್ವಯ ಅಥಣಿ ಪೊಲೀಸರು ಅಪರಾಧ ಸಂಖ್ಯೆ 460/2026, ಕಲಂ 103(1) ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತಿಯನ್ನು ತಕ್ಷಣವೇ ಬಂಧಿಸಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
