Belagavi

ಮಗ ಹುಟ್ಟಿದ ಪಾರ್ಟಿ ಕೇಳಿದ್ದಕ್ಕೆ ಗೆಳೆಯನನ್ನೇ ಕಲ್ಲಿನಿಂದ ಜಜ್ಜಿ ಕೊಂದ ಪಾಪಿ: ಬೆಳಗಾವಿ ಪೊಲೀಸರಿಂದ ಆರೋಪಿ ಬಂಧನ

Share

ಮಗ ಹುಟ್ಟಿದ ಖುಷಿಗೆ ಪಾರ್ಟಿ ಕೇಳಿದ ಗೆಳೆಯನನ್ನೇ ಅತ್ಯಂತ ಕ್ರೂರವಾಗಿ ಕಲ್ಲಿನಿಂದ ಹೊಡೆದು ಕೊಂದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ನಡೆದಿದೆ. ಘಟನೆ ನಡೆದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ನೇಸರಗಿ ಪೊಲೀಸರು ಕೇವಲ 48 ಗಂಟೆಗಳ ಅವಧಿಯಲ್ಲಿ ಬಂಧಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕೆ.ರಾಮರಾಜನ್ ಅವರು ತಿಳಿಸಿದರು.

ದಿನಾಂಕ 26.06.2026 ರಂದು ವಣ್ಣೂರ ಗ್ರಾಮದ ಹನುಮಂತಪ್ಪ ಯಮನಪ್ಪ ಇತಾಪಿ ಎಂಬುವವರು ತಮ್ಮ ಗೆಳೆಯ, ಆರೋಪಿ ವಿಶ್ವನಾಥ ಸಿದ್ದಯ್ಯ ಪೂಜೇರಿ (29 ವರ್ಷ) ಬಳಿ ಹೋಗಿ, “ನಿನಗೆ ಮಗ ಹುಟ್ಟಿದ್ದಾನೆ, ಪಾರ್ಟಿ ಕೊಡು, ಸರಾಯಿ ಕುಡಿಸು ಹಾಗೂ ಬೈಕ್ ಕೊಡು” ಎಂದು ಕೇಳಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ ಜಗಳ ನಡೆದಿದ್ದು, ಇದರಿಂದ ತೀವ್ರ ಆಕ್ರೋಶಗೊಂಡ ಆರೋಪಿ ವಿಶ್ವನಾಥ, ಕೊಲೆ ಮಾಡುವ ಉದ್ದೇಶದಿಂದ ಹನುಮಂತಪ್ಪನಿಗೆ ಅವಾಚ್ಯ ಶಬ್ದಗಳಿಂದ ಬೈದು, ತಲೆಗೆ ಕಲ್ಲಿನಿಂದ ಜೋರಾಗಿ ಜಜ್ಜಿದ್ದಾನೆ. ತೀವ್ರವಾಗಿ ಗಾಯಗೊಂಡ ಹನುಮಂತಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಮೃತನ ತಂದೆ ಯಮನಪ್ಪ ಹನುಮಂತಪ್ಪ ಇತಾಪಿ ನೀಡಿದ ದೂರಿನ ಮೇರೆಗೆ ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಎಸ್ಪಿ ಕೆ.ರಾಮರಾಜನ್ ಐಪಿಎಸ್, ಹೆಚ್ಚುವರಿ ಎಸ್ಪಿ ರಾಮುಗೊಂಡ ಬಸರಗಿ ಹಾಗೂ ಬೈಲಹೊಂಗಲ ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ ನೇಸರಗಿ ಸಿಪಿಐ ಗಜಾನನ ನಾಯ್ಕ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ಚುರುಕಿನ ತಂಡವು ಕೇವಲ 48 ಗಂಟೆಗಳ ಒಳಗಾಗಿ ಕಾರ್ಯಾಚರಣೆ ನಡೆಸಿ, ದಿನಾಂಕ 28.06.2026 ರಂದು ಆರೋಪಿ ವಿಶ್ವನಾಥ ಪೂಜೇರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.

Tags:

error: Content is protected !!