ಬೆಳಗಾವಿ ಜಿಲ್ಲೆಯ ಇತಿಹಾಸದ ಪುಟಗಳಲ್ಲಡಗಿದ್ದ ಕಲೆಯೊಂದು ಈಗ ಮತ್ತೆ ಕಣ್ತುಂಬಿಕೊಳ್ಳುವಂತೆ ಅನಾವರಣಗೊಂಡಿದೆ. ಮುತಗಾ ಗ್ರಾಮದ 300 ವರ್ಷಗಳ ಇತಿಹಾಸವಿರುವ ವಿಶಿಷ್ಟ ಬಾವಿಯೊಂದನ್ನು ಗ್ರಾಮಸ್ಥರು ಹಾಗೂ ಸಾಮಾಜಿಕ ಸಂಸ್ಥೆಗಳು ಒಗ್ಗೂಡಿ ಯಶಸ್ವಿಯಾಗಿ ಪುನರುಜ್ಜೀವನಗೊಳಿಸಿದ್ದು, ಜಿಲ್ಲಾಧಿಕಾರಿಗಳು ಸ್ವತಃ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.


ಬೆಳಗಾವಿ ತಾಲೂಕಿನ ಮುತಗಾ ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವ ಕಾಲದ, ಸುಮಾರು 300 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಬಾವಿಯನ್ನು ಸಾರ್ವಜನಿಕರ ಬಳಕೆಗೆ ಯೋಗ್ಯವಾಗುವಂತೆ ಪುನರುಜ್ಜೀವನಗೊಳಿಸಲಾಗಿದೆ. ಪ್ಯಾಸ್ ಫೌಂಡೇಶನ್, ಡಾ. ಮಾಧವ ಪ್ರಭು ಹಾಗೂ ಸ್ಥಳೀಯ ಗ್ರಾಮಸ್ಥರ ಜಂಟಿ ಆಶ್ರಯದಲ್ಲಿ ಹಗಲಿರುಳು ಶ್ರಮಿಸಿ ಈ ಭಗೀರಥ ಯತ್ನವನ್ನು ಸಾಧಿಸಲಾಗಿದೆ. ವರ್ಷಗಳಿಂದ ಕಸ-ಕಡ್ಡಿಗಳಿಂದ ತುಂಬಿ, ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ಪುರಾತನ ಜಲಮೂಲವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ದುರಸ್ತಿ ಮಾಡುವ ಮೂಲಕ ಅದಕ್ಕೆ ಕಳೆದುಹೋಗಿದ್ದ ವೈಭವವನ್ನು ಮರಳಿ ತರಲಾಗಿದೆ. ಈ ಶ್ಲಾಘನೀಯ ಕಾರ್ಯವು ಕೇವಲ ನೀರಿನ ಸಮಸ್ಯೆಗೆ ಪರಿಹಾರ ನೀಡದೇ, ಜಿಲ್ಲೆಯ ಶ್ರೀಮಂತ ಇತಿಹಾಸವನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.
ಈ ಐತಿಹಾಸಿಕ ಬಾವಿಯ ಯಶಸ್ವಿ ಕಾರ್ಯಾಚರಣೆಯನ್ನು ವೀಕ್ಷಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮುತಗಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಇಂತಹ ಪ್ರಾಚೀನ ಸ್ಮಾರಕಗಳು ಮತ್ತು ಜಲಮೂಲಗಳನ್ನು ಹಂತ-ಹಂತವಾಗಿ ಪುನರುಜ್ಜೀವನಗೊಳಿಸುವ ಇಚ್ಛೆ ತಮಗಿದೆ ಎಂದರು. ಆಡಳಿತ ಮಂಡಳಿ, ಸಾಮಾಜಿಕ ಸಂಸ್ಥೆಗಳು ಮತ್ತು ಸ್ಥಳೀಯ ನಾಗರಿಕರು ಕೈಜೋಡಿಸಿದರೆ ಜಿಲ್ಲೆಯ ಇತಿಹಾಸಕ್ಕೆ ಹೊಸ ಸಂಜೀವಿನಿ ನೀಡಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖ ಸಾಮಾಜಿಕ ಕಾರ್ಯಕರ್ತರಾದ ಉಮೇಶ್ ಪುರಿ, ಕೃಷ್ಣಾ ಪಾಟೀಲ್, ಸೂರಜ್ ಪಾಟೀಲ್, ಪರಶುರಾಮ್ ಕೇದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
