ನಮ್ಮ ನಗರ ಹಾಗೂ ಇಡೀ ರಾಜ್ಯವನ್ನು ಸಂಪೂರ್ಣವಾಗಿ ಪೋಲಿಯೋ ಮುಕ್ತವಾಗಿಸುವುದೇ ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ ಸೇಠ್ ತಿಳಿಸಿದ್ದಾರೆ.


ಬೆಳಗಾವಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಪಲ್ಸ್ ಪೊಲೀಯೋ ಅಭಿಯಾನಕ್ಕೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಚಾಲನೆಯನ್ನು ನೀಡಿದರು. ವೇದಿಕೆಯ ಮೇಲೆ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ರಾಥೋಡ್, ನಗರಸೇವಕ ರಾಜಶೇಖರ್ ಢೋಣಿ, ಆರೋಗ್ಯ ಅಧಿಕಾರಿಗಳಾದ ಗಡಾದ್ ಇನ್ನುಳಿದವರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು ಕಳೆದ 40 ವರ್ಷಗಳಿಂದ ದೇಶದಲ್ಲಿ ಪೋಲಿಯೋ ನಿರ್ಮೂಲನೆಗಾಗಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು. ಪ್ರತಿಯೊಬ್ಬ ಮಗುವಿಗೂ ಪೋಲಿಯೋ ಹನಿ ತಲುಪಿಸುವಲ್ಲಿ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿಯ ಶ್ರಮ ಮತ್ತು ಕಠಿಣ ಪರಿಶ್ರಮ ಶ್ಲಾಘನೀಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ನಗರ ಮತ್ತು ರಾಜ್ಯವನ್ನು ಸಂಪೂರ್ಣವಾಗಿ ಪೋಲಿಯೋ ಮುಕ್ತವಾಗಿಸುವುದೇ ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

ನಗರಸೇವಕ ರಾಜಶೇಖರ್ ಢೋಣಿ ಅವರು ಮಾತನಾಡಿದ ಪೋಲಿಯೋ ಲಸಿಕೆಯ ಮಹತ್ವದ ಬಗ್ಗೆ ಇನ್ನು ಹಲವರಿಗೆ ತಿಳುವಳಿಕೆ ಇರುವುದಿಲ್ಲ, ಆದ್ದರಿಂದ ಪ್ರತಿಯೊಬ್ಬರೂ ತಮ್ಮ ನೆರೆಹೊರೆಯವರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ ಎಲ್ಲಾ ಮಕ್ಕಳಿಗೆ ಲಸಿಕೆ ತಲುಪುವಂತೆ ಮಾಡಬೇಕು. ಸರ್ಕಾರ ಹಮ್ಮಿಕೊಳ್ಳುವ ಈ ಅಭಿಯಾನಕ್ಕೆ ರೋಟರಿ ಮತ್ತು ಲಯನ್ಸ್ನಂತಹ ಹತ್ತಾರು ಸ್ವಯಂಸೇವಾ ಸಂಸ್ಥೆಗಳು ಕೈಜೋಡಿಸುತ್ತಿದ್ದು, ಭಾರತವನ್ನು ಪೋಲಿಯೋ ಮುಕ್ತವಾಗಿಸಲು ಸಕ್ರಿಯವಾಗಿ ಶ್ರಮಿಸುತ್ತಿವೆ ಎಂದರು.
ಇನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ನಮ್ಮ ದೇಶವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ. ಪ್ರತಿಯೊಂದು ಮಗುವಿಗೂ ತಪ್ಪದೇ ಪೋಲಿಯೋ ಲಸಿಕೆಯನ್ನು ಹಾಕಿಸಿ, ಅವರ ಆರೋಗ್ಯಕರ ಭವಿಷ್ಯವನ್ನು ಖಚಿತಪಡಿಸೋಣ ಎಂದರು.
ಈ ವೇಳೆ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲೀಯೋ ಲಸಿಕೆಯನ್ನು ಹಾಕಲಾಯಿತು.
