Khanapur

ಗೋವಾದಲ್ಲಿ ನೀಟ್ ಪೇಪರ್ ಲೀಕ್ ವಿರುದ್ಧ ಕಾಂಗ್ರೆಸ್ ಬೃಹತ್ ಸಮರ: ಕೇಂದ್ರ ಸಚಿವರ ವಿರುದ್ಧ ಕ್ರಮಕ್ಕೆ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಆಗ್ರಹ!

Share

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ ಪೇಪರ್ ಲೀಕ್ ಹಗರಣವನ್ನು ಖಂಡಿಸಿ ಗೋವಾದಲ್ಲಿ ಕಾಂಗ್ರೆಸ್ ಭಾರಿ ಪ್ರತಿಭಟನೆ ನಡೆಸಿದೆ. ಎಐಸಿಸಿ ಕಾರ್ಯದರ್ಶಿ ಹಾಗೂ ಗೋವಾ ಉಸ್ತುವಾರಿ ಡಾ. ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ನಡೆದ ಈ ಬೃಹತ್ ಹೋರಾಟದಲ್ಲಿ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಪ್ರಧಾನಿ ಮೋದಿಯವರು ಇದಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಲಾಗಿದೆ.

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶದ ಲಕ್ಷಾಂತರ ವಿದ್ಯಾರ್ಥಿಗಳಿಗೆ ದ್ರೋಹ ಎಸಗಲಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋವಾ ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಹಗಲು ರಾತ್ರಿ ಎನ್ನದೆ ಓದಿ, ದೇಶದ ಸೇವೆ ಮಾಡಲು ಡಾಕ್ಟರ್ ಆಗಬೇಕೆಂಬ ಕನಸು ಹೊತ್ತ ವಿದ್ಯಾರ್ಥಿಗಳಿಗೆ ವಿಶ್ವಾಸಘಾತವಾಗಿದೆ. ಪೇಪರ್ ಲೀಕ್ ಆಗಿರುವ ಇಲಾಖೆಯ ಸಚಿವರಿಗೆ ಪ್ರಧಾನಿಗಳು ಬೆನ್ನು ತಟ್ಟುವ ಕೆಲಸ ಮಾಡುತ್ತಿರುವುದು ಅತ್ಯಂತ ದುಃಖದ ಸಂಗತಿ. ಯಾರ ಸಂಪುಟದಲ್ಲಿ ಈ ಹಗರಣ ನಡೆದಿದೆಯೋ ಆ ಪ್ರಧಾನ ಮಂತ್ರಿಯವರೇ ಇದಕ್ಕೆ ನೇರ ಹೊಣೆ ಹೊರಬೇಕು” ಎಂದು ಒತ್ತಾಯಿಸಿದರು.

ತಾವು ಕೂಡ ಒಬ್ಬ ವೈದ್ಯೆಯಾಗಿ ವಿದ್ಯಾರ್ಥಿಗಳ ಮತ್ತು ಅವರ ಕುಟುಂಬದ ನೊಂದಣಿಯನ್ನು ಹತ್ತಿರದಿಂದ ಬಲ್ಲೆ ಎಂದ ಅವರು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಉಸ್ತುವಾರಿಯಲ್ಲೇ ಪೇಪರ್ ಲೀಕ್ ಆಗುತ್ತಿರುವುದು ಖಂಡನೀಯ, ಅವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರಾಹುಲ್ ಗಾಂಧಿ ಅವರ ಕರೆಯಂತೆ ಗೋವಾ ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಚಿತ್ ನಾಯಕ ಮತ್ತು ತಂಡದ ನೇತೃತ್ವದಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ, ಭಾರತದ ಯುವ ಜನರು ಎದುರಿಸುತ್ತಿರುವ ದಬ್ಬಾಳಿಕೆ ಮತ್ತು ಸುಲಿಗೆಯ ಸತ್ಯವನ್ನು ದೇಶಾದ್ಯಂತ ಬಹಿರಂಗಪಡಿಸಲು ಕಾಂಗ್ರೆಸ್ ಸಂಘಟಿತ ಹೋರಾಟದ ಮೂಲಕ ತಕ್ಕ ಸಂದೇಶ ನೀಡಲಿದೆ ಎಂದು ಅಂಜಲಿ ನಿಂಬಾಳ್ಕರ್ ಎಚ್ಚರಿಸಿದರು.

Tags:

error: Content is protected !!