Belagavi

ಬೆಳಗಾವಿಯಲ್ಲಿ ಇಂದಿನಿಂದ ‘೨ನೇ ವಿಷನ್ ಕರ್ನಾಟಕ’ ಬೃಹತ್ ವಸ್ತುಪ್ರದರ್ಶನ ಆರಂಭ

Share

ಬೆಳಗಾವಿಯ ಕೆ.ಎಲ್.ಇ. ಶತಮಾನೋತ್ಸವ ಸಮಾವೇಶ ಕೇಂದ್ರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ‘೨ನೇ ವಿಷನ್ ಕರ್ನಾಟಕ’ ಬೃಹತ್ ವಸ್ತುಪ್ರದರ್ಶನ ಆಯೋಜನೆಗೊಂಡಿದೆ. ವಿಕಸಿತ ಭಾರತ-೨೦೪೭ರ ಗುರಿಯೊಂದಿಗೆ ವಿವಿಧ ಸರ್ಕಾರಿ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಈ ಮೆಗಾ ಎಕ್ಸಿಬಿಷನ್ ಹಮ್ಮಿಕೊಳ್ಳಲಾಗಿದೆ.”

ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ದಾಮೋದರದಾಸ್ ಮೋದಿ ಅವರ ದೂರದೃಷ್ಟಿ ಹಾಗೂ ಲೋಕಸಭಾ ಸದಸ್ಯರಾದ ಜಗದೀಶ್ ಶೆಟ್ಟರ್ ಅವರ ಮಾರ್ಗದರ್ಶನದಲ್ಲಿ ಈ ಬೃಹತ್ ವಸ್ತುಪ್ರದರ್ಶನ ಇಂದಿನಿಂದ ಚಾಲನೆ ಪಡೆದಿದೆ. ಬೆಳಗಾವಿಯ ನೆಹರು ನಗರದಲ್ಲಿರುವ ಜಿ.ಎನ್.ಎಂ.ಸಿ. ಕ್ಯಾಂಪಸ್‌ನ ಕೆ.ಎ.ಲ್.ಇ. ಆಸ್ಪತ್ರೆ ರಸ್ತೆಯ ಸಮಾವೇಶ ಕೇಂದ್ರದಲ್ಲಿ ಜೂನ್ ೨೩ ರಿಂದ ಜೂನ್ ೨೫ ರವರೆಗೆ ಪ್ರತಿದಿನ ಬೆಳಗ್ಗೆ ೧೦:೦೦ ರಿಂದ ಸಂಜೆ ೫:೦೦ ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ, ಕೃಷಿ, ರೈಲ್ವೆ, ಬ್ಯಾಂಕಿಂಗ್ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಪ್ರಮುಖ ವಲಯಗಳ ಸರ್ಕಾರಿ ನೀತಿಗಳು ಹಾಗೂ ಯೋಜನೆಗಳ ಬಗ್ಗೆ ಸಮಗ್ರ ಜಾಗೃತಿ ಮೂಡಿಸುವುದು ಈ ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ.

ಭಾರತ ಸರ್ಕಾರದ ಪ್ರಮುಖ ಇಲಾಖೆಗಳ ಸಾಧನೆಗಳನ್ನು ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ‘ವಿಷನ್ ಕರ್ನಾಟಕ’ ಪ್ರದರ್ಶನವು ಅತ್ಯಂತ ಯಶಸ್ವಿಯಾಗಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರದರ್ಶನವು ಮುಖ್ಯವಾಗಿ ವಿದ್ಯಾರ್ಥಿ ಸಮುದಾಯದಲ್ಲಿ ಹಾಗೂ ಸಾರ್ವಜನಿಕರಲ್ಲಿ ಜ್ಞಾನಾಭಿವೃದ್ಧಿ ಮೂಡಿಸಲು ಸಹಕಾರಿಯಾಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು. ಇದೇ ವೇಳೆ, ಇದು ಕೇವಲ ಉದ್ಯೋಗ ಸೃಷ್ಟಿಗೆ ಮಾತ್ರ ಸೀಮಿತವಾಗಿರದೆ, ಸರ್ಕಾರದ ಒಟ್ಟಾರೆ ಪ್ರಗತಿ ಮತ್ತು ಯೋಜನೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ ಎಂದು ಅವರು ಸ್ಪಷ್ಟಪಡಿಸಿದರು.

ಈ ಮೆಗಾ ಪ್ರದರ್ಶನದಲ್ಲಿ ಕೃಷಿ ಕ್ಷೇತ್ರದಿಂದ ಹಿಡಿದು ಮಾಹಿತಿ ತಂತ್ರಜ್ಞಾನದವರೆಗಿನ ವಿವಿಧ ವಲಯಗಳನ್ನು ಪ್ರತಿನಿಧಿಸುವ ಸ್ಟಾಲ್‌ಗಳನ್ನು ಹಾಕಲಾಗಿದ್ದು, ದೇಶದ ಗಣ್ಯ ವ್ಯಕ್ತಿಗಳನ್ನು ಭೇಟಿಯಾಗಲು ಇದು ಸುವರ್ಣಾವಕಾಶವಾಗಿದೆ. ಇದರೊಂದಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಆಕರ್ಷಕ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು. ಇಸ್ರೋ, ಐಸಿಎಂಆರ್, ಎಲ್ಐಸಿ, ಮತ್ತು ನ್ಯಾಷನಲ್ ಇನ್ಶೂರೆನ್ಸ್ ನಂತಹ ದೇಶದ ಮುಂಚೂಣಿ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಶಾಸಕ ಅಭಯ ಪಾಟೀಲ್ ಹೇಳಿದರು.

Tags:

error: Content is protected !!