Belagavi

ಕನ್ನಡ ಕಡ್ಡಾಯದ ಪ್ರತಿ ಹರಿದ ಆರೋಪಿ ಎಂಇಎಸ್ ಕಾರ್ಯಕರ್ತರ ಗಡಿಪಾರಿಗೆ ಆಗ್ರಹ

Share

ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕರ್ತರು ಕನ್ನಡ ಕಡ್ಡಾಯ ಪತ್ರಿಯನ್ನು ಹರಿದಿದ್ದಾರೆಂದು ಆರೋಪಿಸಿ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಬೃಹತ್ ಸ್ವಾಭಿಮಾನಿ ರ್ಯಾಲಿಯನ್ನು ನಡೆಸಲಾಯಿತು.
ಕನ್ನಡ ಕಡ್ಡಾಯ ಪತ್ರಿಯನ್ನು ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕರ್ತರು ಹರಿದಿದ್ದಾರೆಂದು ಆರೋಪಿಸಿ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ರ್ಯಾಲಿ ನಡೆಸಲಾಯಿತು. ಈ ವೇಳೆ ಕರವೇ ಕಾರ್ಯಕರ್ತರು ಎಂಇಎಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಆರ್ ಟಿ ಓ ವೃತ್ತದಲ್ಲಿ ಕರವೇ ಕಾರ್ಯಕರ್ತರನ್ನು ಪೊಲೀಸರು ತಡೆದ ಹಿನ್ನೆಲೆ ಪೊಲೀಸರು ಹಾಗೂ ಕರವೇ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಸ್ಥಳಕ್ಕೆ ಬಂದು ಎಸಿ ಶ್ರವಣಕುಮಾರ ನಾಯಕ್ ಅವರು ಮನವಿಯನ್ನು ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ. ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಅವರು, ರಾಜ್ಯ ಸರ್ಕಾರ ಹೊರಡಿಸಿರುವ ಕನ್ನಡ ಕಡ್ಡಾಯ ಆದೇಶದ ಪ್ರತಿಯನ್ನು ಜಿಲ್ಲಾಧಿಕಾರಿ ಕಾರ್ಯಾಲಯದ ಮುಂಭಾಗದಲ್ಲಿ ಪೊಲೀಸರ ಸಮ್ಮುಖದಲ್ಲಿ ಎಂ.ಇ.ಎಸ್ ಹರಿದು ಹಾಕಿದ್ದು, ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಮಾಡಿದ್ದಾರೆ. ಬೆಳಗಾವಿಯ ಭಾಷಾ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಹದಗೆಡಿಸುತ್ತಿರುವ ಎಂ.ಇ.ಎಸ್. ಮತ್ತು ಶಿವಸೇನೆಯನ್ನು ಬ್ಯಾನ್ ಮಾಡುವಂತೆ ಹಲವು ಬಾರಿ ಆಗ್ರಹಿಸಲಾಗಿದೆ. ಆದರೇ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲವೆಂದರೇ, ದೊಡ್ಡ ಪ್ರಮಾಣದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲಿದ್ದು, ಇದಕ್ಕೆ ಜಿಲ್ಲಾಡಳಿತ ಮತ್ತು ಸರ್ಕಾರವೇ ಹೊಣೆಯಾಗಲಿದೆ.

ಜನಪ್ರತಿನಿಧಿಗಳು ವೋಟ್ ಬ್ಯಾಂಕ್’ಗಾಗಿ ಅನ್ಯ ಭಾಷಿಕರನ್ನ ಓಲೈಸದೇ, ಅವರನ್ನು ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಬೇಕು. ಕನ್ನಡ ಕಡ್ಡಾಯದ ಆದೇಶ ಪ್ರತಿಯನ್ನು ಹರಿದು ಹಾಕಿದವರನ್ನು ಬಂಧಿಸದಿದ್ದರೇ, ತಕ್ಕ ಪಾಠ ಕಲಿಸುತ್ತೇವೆ. ಗೃಹ ಸಚಿವರಿಗೆ ನಾವು ಮನವಿ ಮಾಡಿದ್ದು, ಕರವೇ ಕಾರ್ಯಕರ್ತರು ಯಾವುದೇ ಭಾಷೆಯ ವಿರೋಧಿಯಲ್ಲ. ಕನ್ನಡ ಮತ್ತು ಕರ್ನಾಟಕವನ್ನು ವಿರೋಧಿಸುವವರನ್ನು ಗಡಿಪಾರು ಮಾಡುವ ಕೆಲಸವನ್ನು ಮಾಡಬೇಕು. ಬೆಳಗಾವಿ ಅಭಿವೃದ್ಧಿಗೋಸ್ಕರ ಎಲ್ಲರೂ ಕೈ ಜೋಡಿಸಿ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!