ಬೆಳಗಾವಿ ಗಡಿಭಾಗದಲ್ಲಿ ಭಾಷಾ ಅಲ್ಪಸಂಖ್ಯಾತರ ಕಾನೂನುಗಳ ಜಾರಿ ಹಾಗೂ ಶಾಂತಿ ಸೌಹಾರ್ದತೆ ಕಾಪಾಡಲು ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗದ ಸಮಸ್ಯೆಗಳ ಚರ್ಚೆಗೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ತಿಳಿಸಿದ್ದಾರೆ. ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಿಯೋಗಕ್ಕೆ ಡಿಸಿಯವರು ಈ ಆಶ್ವಾಸನೆ ನೀಡಿದರು.


ಶೇ.60 ರಷ್ಟು ಕನ್ನಡದೊಂದಿಗೆ ಶೇ. 40 ಅನ್ಯ ಭಾಷೆ ಎಂಬ ಕರ್ನಾಟಕ ಸರ್ಕಾರ ಕಾನೂನು ಬೆಳಗಾವಿಯಲ್ಲಿಯೂ ಜಾರಿಯಾಗಲಿ. ಅಲ್ಲದೇ ಭಾಷಿಕ ಅಲ್ಪಸಂಖ್ಯಾತರ ಕಾನೂನಿನಡಿ ಸಿಗಬೇಕಾದ ಸೌಲಭ್ಯಗಳನ್ನು ಬೆಳಗಾವಿ ಜಿಲ್ಲಾಡಳಿತ ಜಾರಿಗೊಳಿಸಲಿ ಎಂದು ಆಗ್ರಹಿಸಿ ಇಂದು ಬೆಳಗಾವಿಯ ಜಿಲ್ಲಾಧಿಕಾರಿಗಳಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿಯೂ ಮನವಿ ಮಾಡಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಮರಗಾಳೆ, ಮುಖಂಡರಾದ ಮಾಜಿ ಶಾಸಕ ಮನೋಹರ ಕಿಣೇಕರ ಇನ್ನುಳಿದವರ ನೇತೃತ್ವದಲ್ಲಿ ಬೆಳಗಾವಿಯ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರಿಗೆ ಈ ಕುರಿತಾದ ಮನವಿಯನ್ನು ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಧ್ಯಕ್ಷ ಪ್ರಕಾಶ್ ಮರಗಾಳೆ ಶೇ. 60 ರಷ್ಟು ಕನ್ನಡ, 40 ರಷ್ಟು ಬೇರೆ ಭಾಷೆಗಳನ್ನು ಬಳಸುವ ತಮ್ಮದೇ ಆದ ಕಾನೂನು ಜಾರಿ ಮಾಡಬೇಕು. ಬೆಳಗಾವಿಯಲ್ಲಿ ಎಂ.ಇ.ಎಸ್. ಪ್ರತಿಭಟನೆಗೆ ಅನುಮತಿ ಕೇಳುವ ಜಿಲ್ಲಾಡಳಿತ ಅನ್ಯ ಸಂಘಟನೆಯವರು ಸರ್ಕಾರದ್ದೇ ಕಾನೂನಿರುವಾಗ ಅನ್ಯ ಭಾಷೆ ಫಲಕಗಳನ್ನು ಅನಧಿಕೃತವಾಗಿ ತೆರವುಗೊಳಿಸುತ್ತಾರೆ. ಅವರಿಗೆ ಜಿಲ್ಲಾಡಳಿತ ಅನುಮತಿ ನೀಡಿರುತ್ತದೆಯೇ? ಅವರಿಗೆ ಪೊಲೀಸ್ ರಕ್ಷಣೆ ನೀಡುವುದು ದುರ್ದೈವದ ಸಂಗತಿ. ಒಂದು ವೇಳೆ ಅನ್ಯ ಭಾಷೆಯ ಫಲಕ ತೆರವುಗೊಳಿಸುವ ಅನುಮತಿ ನೀಡಿದ್ದರೇ ಅದನ್ನು ತೋರಿಸಲಿ. ಬೆಳಗಾವಿಯಲ್ಲಿ ಭಾಷಾ ಅಲ್ಪಸಂಖ್ಯಾತರ ಕಾನೂನುಗಳನ್ನು ಜಾರಿಗೊಳಿಸಲಿ ಎಂದರು.
ಇನ್ನು ಮಾಜಿ ಶಾಸಕ ಮನೋಹರ ಕಿಣೇಕರ್ ಅವರು ಅಲ್ಪಸಂಖ್ಯಾತರ ಆಯೋಗದ ಕಾನೂನಿನಂತೆ ನಮಗೆ ಪ್ರಜಾಪ್ರಭುತ್ವದ ಹಕ್ಕುಗಳನ್ನು ನೀಡಬೇಕು. ಕಳೆದ ವರ್ಷ ಮನವಿ ನೀಡಿದರೂ ಇಲ್ಲಿಯ ವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಗಡಿವಿವಾದದ ತೀರ್ಪು ಬಂದಾಗ ಬರಲಿ. ಆದರೇ, ಅಲ್ಪಸಂಖ್ಯಾತ ಕಾನೂನಿನಡಿ ನಮಗೆ ಸೌಲಭ್ಯಗಳನ್ನು ನೀಡಲಿ. 1990ರಲ್ಲಿದ್ದಂತೆ ಸರ್ಕಾರಿ ಕಾರ್ಯಾಲಯಗಳಲ್ಲಿಯೂ ಕನ್ನಡದೊಂದಿಗೆ ಅನ್ಯ ಭಾಷೆಗಳಿಗೆ ಅವಕಾಶ ನೀಡಲಿ ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಅಡ್ವೋಕೇಟ್ ನಾಗೇಶ್ ಸಾತೇರಿ ಅವರು ಜೂನ್ 8 ರಂದು ಅನುಮತಿ ಕೋರಿ ಮನವಿ ಸಲ್ಲಿಸಿರುವುದಾಗ 21 ಜೂನ್ ರಂದು ಅನುಮತಿ ನಿರಾಕರಿಸಿರುವುದನ್ನು ಖಂಡಿಸುತ್ತೇವೆ. ಮರಾಠಿ ಭಾಷಿಕರು ಪಾಕಿಸ್ತಾನ ಅಥವಾ ಬಾಂಗ್ಲಾದೇಶದಿಂದ ಬಂದಿಲ್ಲ. ನಾವು ಇಲ್ಲಿನ ಮೂಲ ನಿವಾಸಿಗಳಾಗಿದ್ದೇವೆ. ಸಂವಿಧಾನದ 350 ರಡಿ ನಮಗೆ ನೀಡಿದ ಹಕ್ಕನ್ನು ನಮಗೆ ನೀಡಿ. ಬೇರೆ ಭಾಷೆಯವರು ಪ್ರತಿಭಟಿಸುವಾಗ ಕಾನೂನು ಸುವ್ಯವಸ್ಥೆ ಹದಗೆಡುವುದಿಲ್ಲವೇ? ಕೇವಲ ಎಂ.ಇ.ಎಸ್ ಪ್ರತಿಭಟನೆ ನಡೆಸಿದರೇ, ಭಾಷಾ ವಿವಾದ ಹದಗೆಡುತ್ತದೆಯೇ? ನಾವು ಕೇವಲ ನಮ್ಮ ನ್ಯಾಯ ಹಕ್ಕುಗಳನ್ನು ಕೇಳುತ್ತಿದ್ದೇವೆ ಎಂದರು. ಶೇ. 60/40 ರಷ್ಟು ಎಂಬ ಕಾನೂನನ್ನು ನಾವು ಒಪ್ಪಿಕೊಂಡಿದ್ದೇವೆ. ಅದನ್ನು ಕೂಡ ಉಲ್ಲಂಘಿಸಲಾಗುತ್ತಿದೆ ಎಂದರು.
ಇನ್ನು ಮಾಜಿ ಮಹಾಪೌರ ರೇಣು ಕಿಲ್ಲೇಕರ ಅವರು ಹಲವು ಬಾರಿ ಮನವಿ ಸಲ್ಲಿಸಿದರೂ ಡಿಸಿ ಅವರು ಕೇಳುತ್ತಿಲ್ಲ. ಕರ್ನಾಟಕ ಸರ್ಕಾರ ಕಾನೂನುನ್ನು ಒಪ್ಪಿಸುವುದಿಲ್ಲ. ಶಾಂತಿಪೂರ್ಣವಾಗಿ ಮನವಿ ಸಲ್ಲಿಸಿದರೂ ನಮ್ಮ ಮೇಲೆ ಕೇಸ್’ಗಳನ್ನು ಹಾಕುತ್ತಿದ್ದಾರೆ. ಕನ್ನಡದೊಂದಿಗೆ ಮರಾಠಿ ಮತ್ತು ಇಂಗ್ಲೀಷ್ ಭಾಷೆಯಲ್ಲಿಯೂ ಫಲಕಗಳನ್ನು ಅಳವಡಿಸಬೇಕು, ಪರಿಪತ್ರಕಗಳನ್ನು ಅಳವಡಿಸಬೇಕು ಎಂದರು.
ಇನ್ನು ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರು, ಅಲ್ಪಸಂಖ್ಯಾತರ ಕಾನೂನುಗಳ ಜಾರಿ ಮತ್ತು ಸುರಕ್ಷತೆಯನ್ನು ಜಾರಿಗೊಳಿಸುವುದು ಸರ್ಕಾರ ಮತ್ತು ಜಿಲ್ಲಾಡಳಿತದ್ದಾಗಿದೆ. ಬೆಳಗಾವಿಯಲ್ಲಿ ಶಾಂತಿ ಸೌಹಾರ್ದತೆ ನೆಲೆಸಬೇಕು. ಮಹಾರಾಷ್ಟ್ರದಲ್ಲಿನ ಕನ್ನಡಿಗರಿಗೂ ಮತ್ತು ಬೆಳಗಾವಿ ಗಡಿಭಾಗದಲ್ಲಿನ ಮರಾಠಿ ಭಾಷಿಕರ ಸಮಸ್ಯೆಗಳು ಸಂವಿಧಾನಬದ್ಧವಾಗಿ ಚರ್ಚಿಸಿ ಪರಿಹರಿಸಲು ಜಿಲ್ಲಾಮಟ್ಟದ ಸಮನ್ವಯ ಸಮಿತಿಯನ್ನು ಸ್ಥಾಪಿಸಲಾಗುವುದು. ಇದರಲ್ಲಿ ಕಾನೂನುಬದ್ಧ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗುವುದು ಎಂದು ಆಶ್ವಾಸನೆಯನ್ನತ್ತರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪದಾಧಿಕಾರಿಗಳು , ಕಾರ್ಯಕರ್ತರು ಮತ್ತು ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
