ಹಣದ ಆಸೆಗೆ ಬಿದ್ದು ಹೆತ್ತವರು, ಹೊತ್ತವರು ಮೆಚ್ಚುವಂತಹ ಸಂಸಾರವನ್ನು ನರಕ ಮಾಡಿಕೊಂಡರೆ ಹೆತ್ತ ಕರುಳು ಸಹಿಸುವುದಾದರೂ ಹೇಗೆ? ಬೆಳಗಾವಿಯಲ್ಲಿ ವಿಮೆ ಹಣಕ್ಕಾಗಿ ಗಂಡನನ್ನೇ ಕೊಂದ ಮಗಳ ಪಾಪದ ಕೃತ್ಯಕ್ಕೆ ಮನನೊಂದು, ಸಮಾಜಕ್ಕೆ ಮುಖ ತೋರಿಸಲಾಗದೆ ವೃದ್ಧ ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಈ ಕರುಣಾಜನಕ ಘಟನೆ ಸಂಭವಿಸಿದೆ. ಎರಡು ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಸಲೈನ್ನಲ್ಲಿ ವಿಷ ಹಾಕಿ ತನ್ನ ಪತಿ, ಮಾಜಿ ಸೈನಿಕನನ್ನು ಕೊಂದಿದ್ದ ಆರೋಪಿ ಸುಮಾ ಮಂಜರಗಿ ಹಾಗೂ ಆಕೆಯ ಪ್ರಿಯಕರ ಸೇರಿದಂತೆ ಒಂಬತ್ತು ಮಂದಿ ಸದ್ಯ ಜೈಲು ಪಾಲಾಗಿದ್ದಾರೆ. ಆದರೆ, ಹೆತ್ತ ಮಗಳು ಮಾಡಿದ ಈ ಭೀಕರ ಹಾಗೂ ಅವಮಾನಕಾರಿ ಕೃತ್ಯದಿಂದ ತೀವ್ರ ಮನನೊಂದಿದ್ದ ಆಕೆಯ ತಾಯಿ ಮಹಾದೇವಿ ಬಾದಾಮಿ (65), ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಮಾಜದಲ್ಲಿ ಎದುರಾದ ಅಪಮಾನವನ್ನು ತಾಳಲಾರದೇ ವೃದ್ಧೆ ಈ ಕಠಿಣ ನಿರ್ಧಾರ ಕೈಗೊಂಡಿದ್ದು, ಸದ್ಯ ಘಟನಾ ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
