ಸಾವಿನ ನಂತರವೂ ಮತ್ತೊಬ್ಬರಿಗೆ ಜೀವ ನೀಡಬಹುದು ಎಂಬುದನ್ನು ಬೆಳಗಾವಿಯ ವೃದ್ಧೆಯೊಬ್ಬರು ಸಾಬೀತುಪಡಿಸಿದ್ದಾರೆ. ತಮ್ಮ ಅಂತಿಮ ಇಚ್ಛೆಯಂತೆ ಚರ್ಮ ಹಾಗೂ ದೇಹದಾನ ಮಾಡುವ ಮೂಲಕ ಸಮಾಜಕ್ಕೆ ಅತ್ಯುನ್ನತ ಸಂದೇಶ ಸಾರಿದ್ದಾರೆ.
ಬೆಳಗಾವಿ ಜಿಲ್ಲೆಯ ಉಳ್ಳಾಗಡ್ಡಿ ಖಾನಾಪುರದ ನಿವಾಸಿ, 91 ವರ್ಷದ ಅನ್ನಪೂರ್ಣ ಶಿವಪುತ್ರಯ್ಯ ಹಿರೇಮಠ ಅವರು ನಿನ್ನೆ (18.6.2026) ನಿಧನರಾಗಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮೃತರ ಅಂತಿಮ ಇಚ್ಛೆಯಂತೆ ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅವರ ಪಾರ್ಥಿವ ಶರೀರವನ್ನು ಹುಬ್ಬಳ್ಳಿಯ ಕೆಎಲ್‌ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿಗಳು ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸಂಶೋಧನೆಗಾಗಿ ದಾನವಾಗಿ ನೀಡಲಾಗಿದೆ. ಇದರೊಂದಿಗೆ, ಸುಟ್ಟ ಗಾಯಗಳಿಂದ ಬಳಲುತ್ತಿರುವ ರೋಗಿಗಳ ತುರ್ತು ಚಿಕಿತ್ಸೆಗಾಗಿ ಮೃತರ ಚರ್ಮವನ್ನು ಬೆಳಗಾವಿಯ ಕೆಎಲ್ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಚರ್ಮ ಬಂಡಾರಕ್ಕೆ ಹಸ್ತಾಂತರಿಸುವ ಮೂಲಕ ಹಿರೇಮಠ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದಾರೆ. ಸಮಾಜಕ್ಕೆ ಮಾದರಿಯಾದ ಹಿರೇಮಠ ಕುಟುಂಬದ ಈ ಮಹತ್ಕಾರ್ಯಕ್ಕೆ ಡಾ. ರಾಮಣ್ಣವರ ಟ್ರಸ್ಟ್‌ನ ಕಾರ್ಯದರ್ಶಿ ಡಾ. ಮಹಾಂತೇಶ ರಾಮಣ್ಣವರ ಅವರು ಆಳವಾದ ಕೃತಜ್ಞತೆಗಳನ್ನು ಸಲ್ಲಿಸಿದ್ದು, ಮೃತರು ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

