Belagavi

ಸಂಸ್ಥೆಗಳ ಪ್ರಗತಿಗೆ ಹಿರಿಯರ ಮಾರ್ಗದರ್ಶನ ಹಾಗೂ ಜಂಟಿ ಶ್ರಮ ಅತ್ಯಗತ್ಯ: ಡಾ. ಸುನೀತಾ ಪಾಟೀಲ್ ಪ್ರತಿಪಾದನೆ

Share

ಯಾವುದೇ ಸಂಸ್ಥೆಯ ಯಶಸ್ಸು ಮತ್ತು ಸಮಾಜದ ಸಮಗ್ರ ಅಭಿವೃದ್ಧಿಗೆ ಹಿರಿಯರ ಅನುಭವ ಹಾಗೂ ಸೂಕ್ತ ಮಾರ್ಗದರ್ಶನ ಅತ್ಯಂತ ಪ್ರಮುಖವಾಗಿದೆ ಎಂದು ಡಾ. ಸುನೀತಾ ಪಾಟೀಲ್ ಅವರು ಹೇಳಿದರು.

ಬೆಳಗಾವಿಯ ನೆಹರು ನಗರದ ಕನ್ನಡ ಭವನದಲ್ಲಿ ಲಿಂಗಾಯತ ಮಹಿಳಾ ಸಮಾಜ ಬೆಳಗಾವಿ ಹಾಗೂ ಕನ್ನಡ ಭವನದ ಸಹಯೋಗದಲ್ಲಿ “ಸಾಂಸ್ಕೃತಿಕ-ಸಂಭ್ರಮ” ವಾರ್ಷಿಕ ಸಮ್ಮಿಲನ ಹಾಗೂ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಅತ್ಯಂತ ಸಡಗರದಿಂದ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸುನೀತಾ ಪಾಟೀಲ್ ಅವರು, ಸಮಾಜದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಹಿರಿಯರ ಮಾರ್ಗದರ್ಶನ ಅತ್ಯಗತ್ಯವಾಗಿದೆ. ಯಾವುದೇ ಒಂದು ಸಂಸ್ಥೆಯು ಉನ್ನತ ಪ್ರಗತಿಯನ್ನು ಸಾಧಿಸಬೇಕಾದರೆ ಅದರ ಹಿಂದೆ ಹಲವಾರು ನಾಯಕರ ಹಾಗೂ ಕಾರ್ಯಕರ್ತರ ಕೈಗಳು ನಿರಂತರವಾಗಿ ಶ್ರಮಪಟ್ಟಿರುತ್ತವೆ. ಹಿರಿಯರು ನೀಡುವ ಅತ್ಯಮೂಲ್ಯ ಸಲಹೆ ಮತ್ತು ಸೂಚನೆಗಳು ಮುಂಬರುವ ಎಲ್ಲ ಕಾರ್ಯಕ್ರಮಗಳ ಯಶಸ್ವಿಗೆ ಸದಾ ಪೂರಕವಾಗಿರುತ್ತವೆ ಎಂದು ಮಾರ್ಮಿಕವಾಗಿ ನುಡಿದರು.

ಇದೇ ಸುಸಂದರ್ಭದಲ್ಲಿ ಲಿಂಗಾಯತ ಮಹಿಳಾ ಸಮಾಜದ ನೂತನ ಅಧ್ಯಕ್ಷರಾಗಿ ಮಧುಮತಿ ಹಿರೇಮಠ, ಕಾರ್ಯದರ್ಶಿಯಾಗಿ ರಕ್ಷಾ ದೇಗಿನಾಳ ಹಾಗೂ ಸಹ ಕಾರ್ಯದರ್ಶಿಯಾಗಿ ಸರೋಜಾ ನಿಶಾಂದಾರ ಅವರು ಅಧಿಕಾರ ಸ್ವೀಕರಿಸಿದರು.

ಸಮಾರಂಭದಲ್ಲಿ ಶ್ರೀಮತಿ ರತ್ನಪ್ರಭಾ ಬೆಲ್ಲದ, ಡಾ. ಸುನೀತಾ ಪಾಟೀಲ್ ಹಾಗೂ ದುರ್ಗಾ ನಾಡಕರ್ಣಿ ಅವರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಡಾ. ಪುನೀತ್ ರಾಜಕುಮಾರ್ ಮತ್ತು ಆಶಾ ಭೋಸಲೆ ಅವರಿಗೆ ನೃತ್ಯ ರೂಪದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು ಹಾಗೂ ಅಶ್ವಿನಿ ಪಾಟೀಲ ಅವರಿಂದ ಸಿನೇ ಸಂಗೀತ ಪ್ರಸ್ತುತಿ ಜರುಗಿತು. ಲಿಂಗಾಯತ ಮಹಿಳಾ ಸಮಾಜದ ಪದಾಧಿಕಾರಿಗಳು ಮತ್ತು ಕನ್ನಡ ಭವನದ ಪದಾಧಿಕಾರಿಗಳು ಸೇರಿದಂತೆ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.

Tags:

error: Content is protected !!