ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದ ಯುವತಿಯನ್ನು ಬಿಟ್ಟು ಬೇರೆ ಮದುವೆಯಾಗಲು ಮುಂದಾದ ಪ್ರಿಯಕರನನ್ನು ಪ್ರಶ್ನಿಸಿದ್ದಕ್ಕೆ ಯುವತಿಯನ್ನು ಕೊಲೆ ಮಾಡಿ ಶವವನ್ನು ಮಹಾರಾಷ್ಟ್ರದ ಕಾಡಿನಲ್ಲಿ ಎಸೆದಿದ್ದ ಭೀಕರ ಪ್ರಕರಣ ಬೆಳಕಿಗೆ ಬಂದಿದೆ.

ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದ ಗಂಗವ್ವ ಹಂಚಿನಮನಿ (25) ಕೊಲೆಯಾದ ಯುವತಿ. ಹುಕ್ಕೇರಿ ತಾಲೂಕಿನ ರಾಜನಕಟ್ಟಿ ಗ್ರಾಮದ ಬಸವರಾಜ್ ಕರ್ನಾವರ್ (33) ಪ್ರಮುಖ ಆರೋಪಿ.ಆರೋಪಿ ಬಸವರಾಜ್ ತನ್ನ ತಂದೆ ಯಲ್ಲಪ್ಪ ಹಾಗೂ ಮಾವ ಲಗಮಪ್ಪನೊಂದಿಗೆ ಸೇರಿ ಗಂಗವ್ವಳನ್ನು ರಾಡ್ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಮಹಾರಾಷ್ಟ್ರದ ತಿಲಾರಿ ಘಾಟ್ ದಟ್ಟ ಕಾಡಿನಲ್ಲಿ ಶವ ಎಸೆದು ಪರಾರಿಯಾಗಿದ್ದರು.ಮೇ 29ರಂದು ತಿಲಾರಿ ಘಾಟ್ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಬಲವಾದ ಹೊಡೆತದಿಂದ ಹತ್ಯೆಯಾಗಿರುವುದು ದೃಢಪಟ್ಟಿತ್ತು.ರಸ್ತೆ ಹಾಗೂ ಟೋಲ್ಗೇಟ್ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಕಾರಿನ ನಂಬರನ್ನು ಪತ್ತೆಹಚ್ಚಿ ತನಿಖೆ ನಡೆಸಿದಾಗ ಪ್ರಕರಣದ ಸತ್ಯಾಂಶ ಬೆಳಕಿಗೆ ಬಂದಿದೆ.

ಖಾಸಗಿ ಶಾಲೆಯ ಶಿಕ್ಷಕನಾಗಿರುವ ಬಸವರಾಜ್ ಕಳೆದ ಹತ್ತು ವರ್ಷಗಳಿಂದ ಗಂಗವ್ವ ಜೊತೆ ಲಿವ್-ಇನ್ ಸಂಬಂಧದಲ್ಲಿದ್ದನು. ಇತ್ತೀಚೆಗೆ ಬೇರೊಬ್ಬಳ ಜೊತೆ ಮದುವೆಯಾಗಲು ಮುಂದಾಗಿದ್ದ. ಇದನ್ನು ಗಂಗವ್ವ ವಿರೋಧಿಸಿದ್ದರಿಂದ ಕೊಲೆಗೆ ಸಂಚು ರೂಪಿಸಿದ್ದನು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ವಿಶಾಲಗಡಕ್ಕೆ ಹೋಗೋಣ ಎಂದು ನಂಬಿಸಿ ಗಂಗವ್ವಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ತಿಲಾರಿ ಘಾಟ್ನಲ್ಲಿ ಹತ್ಯೆ ನಡೆಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಚಂದಗಡ ಪೊಲೀಸರು ಬಸವರಾಜ್ ಸೇರಿ ಮೂವರನ್ನು ಬಂಧಿಸಿದ್ದಾರೆ.
ಇನ್ನು ಮಗಳನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಎಲ್ಲವು ಚೆನ್ನಾಗಿದೆ ಎಂದು ಮಗಳು ಬಂದಾಗೊಮ್ಮೆ ಹೇಳುತ್ತಿದ್ದಳು. ಆದರೇ ಈಗ ಆಕೆಯನ್ನು ಕೊಲೆ ಮಾಡಲಾಗಿದೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಇನ್ನು ಮೃತಳ ಸಹೋದರ ರಮೇಶ್ ಅವರು ಸಹೋದರಿಯ ಕೊಲೆಯಾಗಿದೆ ಎಂಬುದು ಮಹಾರಾಷ್ಟ್ರ ಪೊಲೀಸರು ಮನೆಗೆ ಬಂದಾಗ ನಮಗೆ ತಿಳಿದಿದೆ. ಆಕೆಯನ್ನು ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದರು.
