ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ತೇನ್ ತಲಾವ್ ಕೆರೆಗೆ ನೀರು ತುಂಬಿಸುವ ಉದ್ದೇಶದಿಂದ ಗ್ರಾಮಸ್ಥರು ಹಾಗೂ ರೈತರು ಒಂದೂವರೆ ಕಿಲೋಮೀಟರ್ ಉದ್ದದ ಕಾಲುವೆಯ ಸ್ವಚ್ಛತೆ ಮತ್ತು ಪುನರ್ಜೀವನ ಕಾರ್ಯವನ್ನು ಶ್ರಮದಾನದ ಮೂಲಕ ಕೈಗೊಂಡಿದ್ದಾರೆ. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಮ್ಮುಖದಲ್ಲಿ ಈ ವಿನೂತನ ಜಲ ಸಂರಕ್ಷಣೆ ಉಪಕ್ರಮ ಯಶಸ್ವಿಯಾಗಿ ನಡೆದಿದೆ.


ಬಸರಿಕಟ್ಟಿ, ಶಿಂದೋಳಿ ಹಾಗೂ ಮುತಗಾ ಗ್ರಾಮಗಳ ಕೃಷಿ ಭೂಮಿಯ ಮೂಲಕ ಹಾದುಹೋಗುವ ಸುಮಾರು ಒಂದೂವರೆ ಕಿಲೋಮೀಟರ್ ಉದ್ದದ ಕಾಲುವೆಯನ್ನು ಪುನಶ್ಚೇತನಗೊಳಿಸಲು ಮುತಗಾ ಗ್ರಾಮಸ್ಥರು ಒಟ್ಟಾಗಿ ಶ್ರಮಿಸುತ್ತಿದ್ದಾರೆ. ಈ ಜಲಮೂಲದಿಂದಲೇ ಗ್ರಾಮದ ಪ್ರಮುಖ ಕೆರೆಗೆ ನೀರು ಪೂರೈಕೆಯಾಗುತ್ತಿದ್ದು, ಕಾಲುವೆ ಹೂಳು ತುಂಬಿದ್ದರಿಂದ ನೀರು ಸರಾಗವಾಗಿ ಹರಿಯುತ್ತಿರಲಿಲ್ಲ. ಇದನ್ನು ಗಮನಿಸಿದ ಗ್ರಾಮ ಪಂಚಾಯತ್ ಪಿಡಿಒ ಬಸವಂತ್ ಕಡೆಮಣಿ, ಸ್ಥಳೀಯ ರೈತ ಬಾಂಧವರು, ಸಾರ್ವಜನಿಕರು ಹಾಗೂ ‘ಆಪ್ಲೇ ಸೇವೇಬಕರಿ’ ಗ್ರೂಪ್‌ನ ಸರ್ವ ಸದಸ್ಯರು ಜಂಟಿಯಾಗಿ ಶ್ರಮದಾನದ ಮೂಲಕ ಕಾಲುವೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.


ಇದೇ ಸಂದರ್ಭದಲ್ಲಿ ಮಾತನಾಡಿದ ಮುತಗಾ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಉಮೇಶ್ ಪೂರಿ ಅವರು, ಬಸರಿಕಟ್ಟಿಯಿಂದ ಮುತಗಾ ವರೆಗಿನ ಈ ಕಾಲುವೆಯು ಸದ್ಯ ಮಣ್ಣಿನದ್ದಾಗಿದ್ದು, ನೀರು ಪೋಲಾಗುವುದನ್ನು ತಡೆಯಲು ಸರ್ಕಾರ ಇದನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು. ಇದರೊಂದಿಗೆ, ಮುಂಬರುವ ಗಣೇಶೋತ್ಸವದ ಸಂದರ್ಭದಲ್ಲಿ ಗ್ರಾಮದ ಜನರಿಗೆ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಕೆರೆಯ ಆವರಣದಲ್ಲೇ ಪ್ರತ್ಯೇಕ ಹಾಗೂ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
