ಇಷ್ಟು ದಿನ ಶಾಂತವಾಗಿದ್ದ ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದಿದ್ದು, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹಾಗೂ ಗುಂಡು ಹಾರಿಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಇಂದು ಆರು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯಿತು. ಹಸ್ತಾಂತರದ ಬಳಿಕ ಅಂತ್ಯಸಂಸ್ಕಾರವು ಜರುಗಿತು. 12 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.


ಹೌದು…ಶುಕ್ರವಾರ ಮಧ್ಯಾಹ್ನ 2 ಗಂಟೆ ವೇಳೆಗೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಜಮೀನಿನಲ್ಲಿ ಭೀಕರ ಕೊಲೆ ನಡೆದಿದ್ದು, ಆರು ಜನರು ಕೊಲೆಯಾಗಿದ್ದಾರೆ. ದುಂಡಪ್ಪ ನಿರಾಳೆ (65), ಸಹೋದರರಾದ ಶಿವಪುತ್ರ ನಿರಾಳೆ (58), ಚಂದ್ರಕಾಂತ ನಿರಾಳೆ(55) ಶಿವಪುತ್ರನ ಮಕ್ಕಳಾದ ರಾಹುಲ ನಿರಾಳೆ(25), ಸಮರ್ಥ ನಿರಾಳೆ(23)ಶಿವಪುತ್ರ ಸಹಚರ ಶಬ್ಬೀರ ಅತ್ತಾರ(45) ಕೊಲೆಯಾಗಿದ್ದಾರೆ. ಇವರ ಜೊತೆಯಲ್ಲಿದ್ದ ಅರವಿಂದ ಕಟಗೆ ಹಾಗೂ ಜೆಸಿಬಿ ಆಪರೇಟರ್ ಸಂದೀಪ ಮಾನೆ ಗಾಯ ಗೊಂಡಿದ್ದು, ವಿಜಯಪುರ ನಗರದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಹಿನ್ನೆಲೆ ನೋಡೊದಾದ್ರೆ ಈ ಹಿಂದೆ 2015ರಲ್ಲಿ ಚಡಚಣ ತಾಲೂಕಿನ ಗೋವಿಂದಪುರದ ನಿವಾಸಿ ಶಿವಾನಂದ ತಳವಾರ ಎಂಬಾತ ತೇಲಿ ಮನೆತನದ ಹುಡುಗಿಯನ್ನು ಅಪಹರಿಸಿಕೊಂಡು ಹೋಗಿದ್ದ. ಇದರಿಂದ ಕುಪಿತಗೊಂಡ ತೇಲಿ ಮನೆತನದ ಶಶಿಕಾಂತ ತೇಲಿ, ಪ್ರಶಾಂತ ತೇಲಿ, ಕಾಮನಿಂಗ ತೇಲಿ, ಮಹಾದೇವ ತೇಲಿ ಸೇರಿಕೊಂಡು ಶಿವಾನಂದ ತಳವಾರ ಎಂಬಾತನನ್ನು ಕೊಲೆ ಮಾಡಿದ್ದು, ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಈ ಸಮಯದಲ್ಲಿ ತೇಲಿ ಮನೆತನದವರು ಗೋವಿಂದಪೂರದಲ್ಲಿನ ಜಮೀನು ಬಿಟ್ಟು ಬೇರೆಡೆ ನೆಲೆಸಿದ್ದು, ಅಂದಿನಿಂದ ಈ ಜಮೀನು ಖಾಲಿ ಬಿದ್ದಿತ್ತು. ಸದರಿಯವರಿಗೆ ಸೇರಿದ ಜಮೀನು ಉಳುಮೆ ಇಲ್ಲದೇ ಹಾಗೇ ಉಳಿದಿತ್ತು. ಹೀಗೆ ಉಳುಮೆ ಇಲ್ಲದೆ ಬಿದ್ದಿದ್ದ ಜಮೀನು ಖರೀದಿಸಿ ಕೊಲೆಯಾದರಾ? ಎಂಬ ಅನುಮಾನ ವ್ಯಕ್ತವಾಗಿದೆ.


ಇನ್ನೂ ಘಟನೆ ಕುರಿತು ಮಾಹಿತಿ ಪಡೆದ ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ಅಧಿಕಾರ ಸ್ವೀಕರಸಿದ ದಿನವೇ ಘಟನೆ ನಡೆದಿದ್ದು ತಡರಾತ್ರಿ ವಿಜಯಪುರ ಎಸ್ ಪಿ ಲಕ್ಷಣ ನಿಂಬರಗಿ ಜೊತೆಗೆ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮಾದ್ಯಮಗಳ ಜೊತೆಗೆ ಮಾತನಾಡಿ ಪ್ರಾಥಮಿಕ ಮಾಹಿತಿಯಂತೆ ಸದರಿ ಘಟನೆಯಲ್ಲಿ ಈ ಹಿಂದೆ ನಡೆದ ಚಡಚಣ ಠಾಣೆಯ ಕ್ರೈಂ ಸಂಖ್ಯೆ: 156/2015 ಯು/ಎಸ್ 302 ಐಪಿಸಿ ಪ್ರಕರಣದಲ್ಲಿನ ಗೋವಿಂದಪುರ ನಿವಾಸಿ, ದೂರುದಾರ ಕಲ್ಲನಗೌಡ ತಂ.ಈಶ್ವರಗೌಡ ಪಾಟೀಲನ ಈತನ ಕಡೆಯವರು ಇರಬಹುದೆಂದು ಶಂಕಿಸಲಾಗಿದೆ. ಘಟನೆ ಕುರಿತು ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ. ಇನ್ನೂ ಶುಕ್ರವಾರ 6 ಜನರ ಬೀಭತ್ಸ ಕೊಲೆಗೆ ಸಾಕ್ಷಿಯಾಗಿದ್ದ ಜಮೀನಿನಲ್ಲಿ ಇಂದು ಸ್ಮಶಾನಮೌನ ಕಂಡು ಬಂದಿತು.

ಇನ್ನೂ ಚಡಚಣ ಪಟ್ಟಣದಲ್ಲಿ ಸಾವಿರಾರು ಜನರ ನಡುವೆ ಮೃತರ ಅಂತ್ಯಕ್ರಿಯೆ ನಡೆಯಿತು. ಮೃತರ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು. ಸಾವಿರಾರು ಜನರು ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದರು. ಇನ್ನೂ ಇತ್ತ ಚಡಚಣ ಪೊಲೀಸ್ ಠಾಣೆಯಲ್ಲಿ ಚೈತನ್ಯಕುಮಾರ ನಿರಾಳೆ ಎಂಬುವರು ದೂರು ದಾಖಲಿಸಿದ್ದಾರೆ. ದೂರಿನಲ್ಲಿ 12 ಜನರ ವಿರುದ್ದ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ ಈಶ್ವರಗೌಡ ಕಲ್ಲಣಗೌಡ ಪಾಟೀಲ್, ಅಪ್ಪುಗೌಡ ಲಗಮಗೌಡ ಪಾಟೀಲ್, ಈಶ್ವರಪ್ಪ ಲಗಮಗೌಡ ಪಾಟೀಲ್, ಬಸವರಾಜ ಲಸಮಯ್ಯ ಮಠಪತಿ, ಪ್ರಶಾಂತ್ ಬಸವರಾಜ ಪಾಟೀಲ್, ಸಿದ್ದರಾಮ ಕಲ್ಲಣಗೌಡ ಪಾಟೀಲ್, ಲಯಪ್ಪ ನೇಮಪ್ಪ ಬಿರಾದಾರ, ಅನಿಲಕುಮಾರ ಮಂದೇವ ಕೋಲಿ, ಬಸಿರ್ ಅಜೀಜ್ ಶೇಖ್,ಶ್ರೀರಾಮ ಶಂಕರಪ್ಪ ಬಿರಾದಾರ, ಪ್ರಕಾಶ ಮಾದೇವ ಜಾವರೇಕರ್ ಹಾಗೂ ಅಪ್ಪಣ್ಣ ಶಂಕರ ಭೋವಿ ಇವರ ಮೇಲೆ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಹಡೆಮುರಿ ಕಟ್ಟಲು ಜಾಲ ಬೀಸಿದ್ದಾರೆ.
