ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಶಾಸನದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಬೆಳಗಾವಿ ಜಿಲ್ಲಾ ಮಟ್ಟದ ನೂತನ ಸಲಹಾ ಸಮಿತಿ ರಚನೆಯಾಗಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕಗೊಂಡಿರುವ ಈ ಸಮಿತಿಯ ಪ್ರಥಮ ಮಹತ್ವದ ಸಭೆಯು ಇಂದು ಜರುಗಿದ್ದು, ಹೆಣ್ಣು ಭ್ರೂಣ ಹತ್ಯೆ ತಡೆ ಹಾಗೂ ಕಾಯ್ದೆಯ ಕಟ್ಟುನಿಟ್ಟಿನ ಜಾರಿಗೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಬೆಳಗಾವಿ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಸಹಯೋಗದಲ್ಲಿ, ಪಿ.ಸಿ.ಪಿ.ಎನ್.ಡಿ.ಟಿ (PCPNDT) ಕಾಯ್ದೆ 1994ರ ನೂತನ ಜಿಲ್ಲಾ ಸಲಹಾ ಸಮಿತಿಯ ಪ್ರಥಮ ಸಭೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಪಿ.ಸಿ.ಪಿ.ಎನ್.ಡಿ.ಟಿ ನೋಡಲ್ ಅಧಿಕಾರಿಗಳಾದ ಡಾ. ವಿಶ್ವನಾಥ ಎಮ್. ಭೋವಿ ಅವರು ನೂತನ ಸಮಿತಿಯ ಪದಾಧಿಕಾರಿಗಳನ್ನು ಸ್ವಾಗತಿಸಿ, ಲಿಂಗ ಪತ್ತೆ ತಡೆ ಕಾಯ್ದೆಯಡಿ ಸದಸ್ಯರು ವಹಿಸಬೇಕಾದ ಜವಾಬ್ದಾರಿಗಳು ಮತ್ತು ಕಾನೂನು ಉಲ್ಲಂಘಿಸುವ ಸ್ಕ್ಯಾನಿಂಗ್ ಕೇಂದ್ರಗಳ ವಿರುದ್ಧ ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಸರ್ಕಾರಿ ಅಧಿಸೂಚನೆ ಪ್ರಕಾರ ಮುಂದಿನ ಮೂರು ವರ್ಷಗಳ ಅವಧಿಗೆ ರಚನೆಯಾಗಿರುವ ಈ ನೂತನ ಸಮಿತಿಯ ಅಧ್ಯಕ್ಷರಾಗಿ ಡಾ. ಮಂಜುನಾಥ ಹುಕ್ಕೇರಿ ಅಧಿಕಾರ ವಹಿಸಿಕೊಂಡರೆ, ಸದಸ್ಯರಾದ ಡಾ. ರಮೇಶ ಚಂ. ಪಟ್ಟಣಶೆಟ್ಟಿ, ಡಾ. ಸ್ಟೆಲ್ಲಾ ಪಟ್ಟಣಶೆಟ್ಟಿ,


ಶ್ರೀ ಕುಮಾರ ಜ್ಯೋತೇಪ್ಪಾ ಸರವದೆ, ಶ್ರೀ ಸಂಜಯ ಪಂಚಾಕ್ಷರಿ ಹೊಸಮಠ, ಶ್ರೀಮತಿ ಸವಿತಾ ಸುಭಾಷ ಹೆಬ್ಬಾರ ಹಾಗೂ ಶ್ರೀ ಮಹಾದೇವ ಕೇ. ರಾಠೋಡ ಅವರು ಸಭೆಯಲ್ಲಿ ಪಾಲ್ಗೊಂಡು, ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿದರು.
