ವಿಜಯಪುರ ನಗರದ ಹೊರವಲಯದ ಬೆಂಗಳೂರು ಬೈಪಾಸ್ ನಲ್ಲಿ ಓವರ್ ಬ್ರೀಡ್ಜ್ ಕಾಮಗಾರಿ ಭರದಿಂದ ಸಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಓವರ್ ಬ್ರಿಡ್ಜ್ ಕಾಮಗಾರಿ ಸ್ಥಳದಲ್ಲಿ ಮತ್ತೊಂದು ಅಂಡರ್ ಪಾಸ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಹಾಗೂ ಜನ ಪ್ರತಿನಿಧಿಗಳು ರಸ್ತೆಗಿಳಿದು ಹೋರಾಟ ನಡೆಸಿದರು. ಕಾಮಗಾರಿ ನಡೆಯುತ್ತಿರುವ ಸಂಗಮೇಶ್ವರ ಆಸ್ಪತ್ರೆ ಬಳಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು, ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ…

ಹೌದು ವಿಜಯಪುರ ನಗರ ಹೊರಭಾಗದ ಬೆಂಗಳೂರು ಬೈಪಾಸ್ ಬಳಿ ಓವರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದೆ. ಆದರೆ, ಈ ಕಾಮಗಾರಿಯಿಂದಾಗಿ ಸ್ಥಳೀಯ ಬಡಾವಣೆಗಳ ಸಂಪರ್ಕ ಕಡಿತಗೊಳ್ಳುವ ಭೀತಿ ಅಕ್ಕಪಕ್ಕದ ಬಡಾವಣೆಯ ನಿವಾಸಿಗಳಿಗೆ ಎದುರಾಗಿದೆ. ನಗರ ಹೊರ ಭಾಗದ ಸಂಗಮೇಶ್ವರ ಆಸ್ಪತ್ರೆ ಮುಂಭಾಗದ ರಸ್ತೆಯನ್ನು ಬಳಸುವ ಸಾವಿರಾರು ಸಾರ್ವಜನಿಕರು, ರೋಗಿಗಳು ಹಾಗೂ ವಾಹನ ಸವಾರರಿಗೆ ಮುಂದಿನ ದಿನಗಳಲ್ಲಿ ತೀವ್ರ ತೊಂದರೆಯಾಗಲಿದೆ. ಇದನ್ನರಿತ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು, ತಮಗೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸಂಗಮೇಶ್ವರ ಆಸ್ಪತ್ರೆ ಬಳಿಯೇ ಮತ್ತೊಂದು ಅಂಡರ್ ಪಾಸ್ ನಿರ್ಮಿಸಿಕೊಡಬೇಕು ಎಂದು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ಹೊರ ಹಾಕಿದರು…

ಇನ್ನೂ ಬಡಾವಣೆಯ ನಿವಾಸಿಗಳ ಹೋರಾಟಕ್ಕೆ ವಿಜಯಪುರ ಮಹಾನಗರ ಪಾಲಿಕೆಯ ಸದಸ್ಯರು ಸಹ ಸಾಥ್ ನೀಡಿದರು. ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 21 ರ ಬಿಜೆಪಿ ಸದಸ್ಯ ಮಲ್ಲಿಕಾರ್ಜುನ ಗಡಗಿ ಹಾಗೂ ವಾರ್ಡ್ 22ರ ಬಿಜೆಪಿ ಸದಸ್ಯ ಪ್ರೇಮಾನಂದ ಬಿರಾದಾರ ಸಾಥ್ ನೀಡಿ ಆಕ್ರೋಶ ಹೊರ ಹಾಕಿದರು. ಬಡಾವಣೆಯ ಜನರ ಸಮಸ್ಯೆಗಳ ಮುಂದೆ ರಾಜಕೀಯ ಮುಖ್ಯವಲ್ಲ ಮೊದಲು ಜನರ ಸಮಸ್ಯೆ ಬೆ ಹರಿಸಲು ನಾವು ಪ್ರಯತ್ನ ಮಾಡಬೇಕು ಆಮೇಲೆ ಪಕ್ಷ ಎಂದರು. ಇನ್ನೂ ಈ ವಿಚಾರ ಸಂಸದರ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸುವ ಪ್ರಯತ್ನ ಮಾಡಲಾಗುವದು ಎಂದರು…
ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ, ಈ ಗಂಭೀರ ಸಮಸ್ಯೆಯನ್ನು ತಕ್ಷಣವೇ ವಿಜಯಪುರ ಸಂಸದರಾದ ರಮೇಶ್ ಜಿಗಜಿಣಗಿ ಅವರು ಈ ಸಮಸ್ಯೆ ಬಗೆ ಹರಿಸಲು ಯತ್ನಿಸಬೇಕಿದೆ. ಅಭಿವೃದ್ಧಿಯ ಹೆಸರಿನಲ್ಲಿ ಸ್ಥಳೀಯ ಸಾರ್ವಜನಿಕರ ಸಂಚಾರ ಹಕ್ಕನ್ನು ಕಸಿದುಕೊಳ್ಳಬಾರದು ಎಂಬುದು ವಿಜಯಪುರ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಆಡಳಿತ ಪಕ್ಷ-ಪ್ರತಿಪಕ್ಷ ಎನ್ನದೆ ಪಾಲಿಕೆ ಸದಸ್ಯರೇ ನೇರವಾಗಿ ಬೀದಿಗಿಳಿದು ಹೋರಾಡುತ್ತಿರುವುದರಿಂದ ಮುಂಬರುವ ದಿನದಲ್ಲಿ ಈ ಹೊರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾದ್ಯತೆ ಇದೆ. ಇದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಸಂಸದರು ಪ್ರಯತ್ನ ಮಾಡುತ್ತಾರಾ ಎಂಬುದನ್ನು ಕಾದು ನೊಡಬೇಕಿದೆ.
