Belagavi

ಮಾನವೀಯತೆ ಮೆರೆದ ಮಾಜಿ ಮೇಯರ್ ವಿಜಯ್ ಮೋರೆ ತಂಡ: ವಾರಿಸುದಾರರಿಲ್ಲದ ವೃದ್ಧೆಯ ಶವಕ್ಕೆ ಗೌರವಯುತ ಅಂತ್ಯಸಂಸ್ಕಾರ

Share

ಬೆಳಗಾವಿಯಲ್ಲಿ ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಎತ್ತಿಹಿಡಿಯುವ ಅತ್ಯಂತ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ಬೆಳಗಾವಿಯ ಸಿವಿಲ್ ಆಸ್ಪತ್ರೆಗೆ ದಾಖಲಾಗಿ, ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದ ಅನಾಥ ವೃದ್ಧೆಯೊಬ್ಬರ ಶವಕ್ಕೆ ಮಾಜಿ ಮೇಯರ್ ವಿಜಯ್ ಮೋರೆ ಅವರ ಮಾರ್ಗದರ್ಶನದಲ್ಲಿ ಅಲಾನ್ ವಿಜಯ್ ಮೋರೆ ಮತ್ತು ಅವರ ತಂಡ ಹಾಗೂ ಎಪಿಎಂಸಿ ಪೊಲೀಸರು ಸೇರಿ ಅತ್ಯಂತ ಗೌರವಯುತವಾಗಿ ಅಂತಿಮ ಸಂಸ್ಕಾರ ನೆರವೇರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಸಿವಿಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದರೆ ಅವರ ಗುರುತು ಪತ್ತೆಯಾಗದ ಕಾರಣ ಮತ್ತು ಯಾರೂ ವಾರಿಸುದಾರರು ಬಾರದ ಹಿನ್ನೆಲೆಯಲ್ಲಿ ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು. ಮೃತರ ಸಂಬಂಧಿಕರಿಗಾಗಿ ಕಾಯಲಾಯಿತಾದರೂ ಯಾರೂ ಮುಂದೆ ಬಾರದಿದ್ದಾಗ, ಎಪಿಎಂಸಿ ಪೊಲೀಸ್ ಠಾಣೆಯ ಸಿಪಿಐ ಉಸ್ಮಾನ್ ಆವಟಿ ಅವರ ಸಹಕಾರದೊಂದಿಗೆ ಮೃತ ದೇಹಕ್ಕೆ ಸನಾತನ ಸಂಪ್ರದಾಯದಂತೆ ಗೌರವಯುತ ಅಂತ್ಯಸಂಸ್ಕಾರ ನೆರವೇರಿಸಲು ಸಾಮಾಜಿಕ ಕಾರ್ಯಕರ್ತರು ಮುಂದಾದರು.

ಪೊಲೀಸ್ ಇಲಾಖೆ ಹಾಗೂ ಸಾಮಾಜಿಕ ಕಾರ್ಯಕರ್ತರ ಸಮನ್ವಯದೊಂದಿಗೆ ಮೃತದೇಹವನ್ನು ಸಿವಿಲ್ ಆಸ್ಪತ್ರೆಯಿಂದ ಸದಾಶಿವನಗರದ ಸ್ಮಶಾನಕ್ಕೆ ಸಾಗಿಸಲಾಯಿತು. ಅಲ್ಲಿ ಅಲಾನ್ ವಿಜಯ್ ಮೋರೆ ಮತ್ತು ತಂಡದವರು ವೃದ್ಧೆಯ ಆತ್ಮಕ್ಕೆ ಶಾಂತಿ ಸಿಗುವಂತೆ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು. ಈ ಮಾನವೀಯ ಕಾರ್ಯದಲ್ಲಿ ಎಪಿಎಂಸಿ ಪೊಲೀಸ್ ಸಿಬ್ಬಂದಿಯಾದ ಎಂ. ಯಡಹಳ್ಳಿ, ಅವಧೂತ್ ತುಡವೇಕರ್, ಅದ್ವೈತ್ ಚವಾಣ್ ಪಾಟೀಲ್, ಮೈಕಲ್ ಪಿಂಟೊ, ಶವವಾಹನದ ನಿಶಾರ್ ಶಂಶೇರ್, ಸಂಜಯ್ ಮೇತ್ರಿ ಹಾಗೂ ಸದಾಶಿವನಗರ ಸ್ಮಶಾನದ ಸಿಬ್ಬಂದಿ ಉಪಸ್ಥಿತರಿದ್ದು ಸಹಕರಿಸಿದರು. ಸಮಾಜದಿಂದ ಮರೆತುಹೋದ ಜೀವಕ್ಕೂ ಅಂತಿಮ ಜರ್ನಿಯಲ್ಲಿ ಗೌರವ ನೀಡಿದ ಮಾಜಿ ಮೇಯರ್ ವಿಜಯ್ ಮೋರೆ ಅವರ ತಂಡದ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ

Tags:

error: Content is protected !!