ಗಡಿ ಜಿಲ್ಲೆ ಬೆಳಗಾವಿಯಲ್ಲಿ 7ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನವು ಅತ್ಯಂತ ಉತ್ಸಾಹ ಮತ್ತು ಸಡಗರದಿಂದ ನೆರವೇರಿದೆ. ಖಾನಾಪುರ ರಸ್ತೆಯ ಛತ್ರಪತಿ ಶಿವಾಜಿ ಮಹಾರಾಜ್ ಸಮ್ಮೇಳನ ನಗರಿಯಲ್ಲಿ (ಮರಾಠಾ ಮಂದಿರ) ನಡೆದ ಈ ಸಮ್ಮೇಳನದಲ್ಲಿ ಸಾತಾರಾದ ಹಿರಿಯ ಸಾಹಿತಿ ಪ್ರಾಂಶುಪಾಲ ಡಾ. ಯಶವಂತ್ ಪಾಟಣೆ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಸಾಹಿತಿಗಳು ನಿರ್ಭೀತ ಸತ್ಯಶೋಧಕರಾಗಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ.


ಅಖಿಲ ಭಾರತ ಮರಾಠಿ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಶಾಖೆ ಹಾಗೂ ಮರಾಠಾ ಮಂದಿರದ ಜಂಟಿ ಆಶ್ರಯದಲ್ಲಿ ಈ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಯಶವಂತ್ ಪಾಟಣೆ ಅವರು, “ಮಾತೃಭಾಷೆ ಎಂಬುದು ಕೇವಲ ಪದಗಳ ಜೋಡಣೆಯಲ್ಲ, ಅದು ಮನುಷ್ಯನ ಸಾಂಸ್ಕೃತಿಕ ಗುರುತು ಮತ್ತು ಭಾಷಿಕ ಅಸ್ಮಿತೆಯಾಗಿದೆ. ವೈದ್ಯರು, ಇಂಜಿನಿಯರ್‌ಗಳು ಅಥವಾ ಕಲೆಕ್ಟರ್ ಆಗಲು ಯಾವುದೇ ಭಾಷೆ ನೆರವಾಗಬಹುದು, ಆದರೆ ಮುಂದಿನ ತಲೆಮಾರಿನ ಬರಹಗಾರರು, ಕವಿಗಳು ಮತ್ತು ಕಲಾವಿದರನ್ನು ರೂಪಿಸಲು ಮಾತೃಭಾಷೆಯ ಸಂಸ್ಕಾರವೇ ಪ್ರೇರಣೆ. ಪ್ರಸ್ತುತ ಧಾರ್ಮಿಕ ಮತ್ತು ಭಾಷಿಕ ದ್ವೇಷದಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತಿದ್ದು, ಮೌಲ್ಯರಹಿತ ರಾಜಕಾರಣದಿಂದ ಸಂವಿಧಾನಕ್ಕೆ ಧಕ್ಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯುವಜನತೆ, ರೈತರು ಮತ್ತು ಕಾರ್ಮಿಕರ ಆಕ್ರೋಶಕ್ಕೆ ಧ್ವನಿಯಾಗಲು ಸಾಹಿತಿಗಳು ಧೈರ್ಯಶಾಲಿಯಾಗಬೇಕು” ಎಂದು ಪ್ರತಿಪಾದಿಸಿದರು.


ರವಿವಾರ ಬೆಳಿಗ್ಗೆ 9 ಗಂಟೆಗೆ ಗ್ರಂಥಪೂಜೆ ಹಾಗೂ ಭವ್ಯ ಗ್ರಂಥದಿಂಡಿ ಮೆರವಣಿಗೆಯೊಂದಿಗೆ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಉದ್ಯಮಿ ಹಾಗೂ ಮರಾಠಾ ಮಂದಿರದ ಅಧ್ಯಕ್ಷ ಅಪ್ಪಾಸಾಹೇಬ್ ಗುರವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೊದಲ ಸತ್ರದ ಬಳಿಕ ನಡೆದ ಎರಡನೇ ಗೋಷ್ಠಿಯಲ್ಲಿ ಪುಣೆಯ ಶಿವವ್ಯಾಖ್ಯಾನಕಾರ ಯಶವಂತ್ ಗೋಸಾವಿ ಅವರು ‘ಛತ್ರಪತಿ ಶಿವರಾಯರು: ಇಂದಿನ ಕಾಲದ ಅಗತ್ಯ’ ಎಂಬ ವಿಷಯದ ಕುರಿತು ಭಾಷಣ ಮಾಡಿದರು.

ತದನಂತರ ನಡೆದ ಮೂರನೇ ಸತ್ರದಲ್ಲಿ ಮುಂಬೈನ ಲೋಕಕವಿ ಪ್ರಶಾಂತ್ ಮೋರೆ ಅವರಿಂದ ‘ಕಾಳಜಾತಲ್ಯ ಕವಿತಾ’ (ಹೃದಯದ ಕವಿತೆಗಳು) ಕವಿಗೋಷ್ಠಿ ನೆರವೇರಿತು. ಈ ಸಾಹಿತ್ಯ ಸಂಭ್ರಮದಲ್ಲಿ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ನೂರಾರು ಸಾಹಿತಿಗಳು, ಕವಿಗಳು ಹಾಗೂ ಸಾಹಿತ್ಯಾಸಕ್ತರು ಸಕ್ರಿಯವಾಗಿ ಭಾಗವಹಿಸಿದ್ದರು.


