BELAGAVI

ಬೆಳಗಾವಿಯಲ್ಲಿ ಮತ್ತೆ ಭಾಷಾ ವಿವಾದದ ಕಿಡಿ: ಜೂನ್ 15 ರಂದು ಎಂಇಎಸ್‌ನಿಂದ ಪ್ರತಿಭಟನಾ ಮೆರವಣಿಗೆ

Share

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಭಾಷಾ ವಿವಾದ ತಲೆದೂರುವ ಲಕ್ಷಣಗಳು ಕಾಣಿಸುತ್ತಿವೆ. ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಆದೇಶದ ಮೇರೆಗೆ ಇಂದು ತಾಲೂಕಾ ಎಂಇಎಸ್ ಸಭೆ ನಡೆದಿದ್ದು, ಭಾಷಾ ಫಲಕಗಳ ವಿಚಾರವಾಗಿ ಜೂನ್ 15 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ. ಕನ್ನಡ ಸಂಘಟನೆಗಳ ಅಭಿಯಾನದ ವಿರುದ್ಧ ಎಂಇಎಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಆದೇಶದಂತೆ ಇಂದು ತಾಲೂಕಾ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಭೆಯನ್ನು ಕರೆಯಲಾಗಿತ್ತು.

ಗಡಿ ವಿವಾದದಲ್ಲಿ ಮಡಿದ ಹುತಾತ್ಮರಿಗೆ ಗೌರವ ಸಲ್ಲಿಸಲು ಜೂನ್ 1 ರಂದು ಹಿಂಡಲಗಾದಲ್ಲಿ ಬೃಹತ್ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲು ಎಂಇಎಸ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಗಡಿ ವಿವಾದವನ್ನು ಇತ್ಯರ್ಥಗೊಳಿಸಲು ನಾವೆಲ್ಲರೂ ಒಗ್ಗಟ್ಟಾಗಿ ಕಟಿಬದ್ಧರಾಗಬೇಕು ಎಂಬ ಶಪಥವನ್ನು ಈ ವೇಳೆ ಕೈಗೊಳ್ಳಲಾಗುವುದು ಎಂದು ಸಮಿತಿ ತಿಳಿಸಿದೆ. ಇದರ ಬೆನ್ನಲ್ಲೇ ಜೂನ್ 15 ರ ಒಳಗೆ ಬೆಳಗಾವಿಯಲ್ಲಿ ಮರಾಠಿ ಸೇರಿದಂತೆ ಅನ್ಯ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸಲು ಕರ್ನಾಟಕ ರಕ್ಷಣಾ ವೇದಿಕೆ ಮುಂದಾಗಿರುವುದಕ್ಕೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಸರ್ಕಾರದ ನಿಯಮಾವಳಿಗಳ ಪ್ರಕಾರ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಮತ್ತು ಶೇಕಡಾ 40 ರಷ್ಟು ಅನ್ಯ ಭಾಷೆಗಳಿಗೆ ಸ್ಥಾನಮಾನ ನೀಡಲು ಅವಕಾಶವಿದೆ. ಈ ಕಾನೂನು ಸರ್ಕಾರಿ ಕಾರ್ಯಾಲಯಗಳು ಮತ್ತು ಖಾಸಗಿ ಸಂಸ್ಥೆಗಳಿಗೂ ಅನ್ವಯಿಸುತ್ತದೆ ಎಂದು ಎಂಇಎಸ್ ವಾದಿಸಿದೆ. ಕನ್ನಡ ಸಂಘಟನೆಗಳ ಕ್ರಮವನ್ನು ಖಂಡಿಸಿ ಹಾಗೂ ನಿಯಮಾವಳಿ ಪಾಲನೆಗೆ ಆಗ್ರಹಿಸಿ ಜೂನ್ 15 ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಜಿ ಶಾಸಕ ಮನೋಹರ ಕಿಣೇಕರ್ ಅವರು ಇನ್ ನ್ಯೂಸ್’ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಆರ್. ಎಂ. ಚೌಗುಲೆ, ಮೋದಗೇಕರ, ಹೊನಗೇಕರ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!