ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಪುಸ್ತಕಗಳ ಜ್ಞಾನವಷ್ಟೇ ಅಲ್ಲ, ಸಂಸ್ಕಾರಯುತ ಶಿಕ್ಷಣವೂ ಅಗತ್ಯವಾಗಿದೆ. ಉತ್ತಮ ಮೌಲ್ಯಗಳೊಂದಿಗೆ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಪೋಷಕರದ್ದಾಗಿದ್ದು, ಉಗಾರದಲ್ಲಿ ಆರಂಭಗೊಂಡಿರುವ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಗುರುದೇವ ಗ್ರಾಮೀಣಾಭಿವೃದ್ಧಿ ವಿದ್ಯಾವರ್ಧಕ ಸಂಸ್ಥೆಯ ವಸತಿ ಶಾಲೆಯ ಸದುಪಯೋಗವನ್ನು ಪಾಲಕರು ಪಡೆದುಕೊಳ್ಳಬೇಕು ಎಂದು ಹಂಚಿನಾಳ ಮಠದ ಪರಮಪೂಜ್ಯ ಮಹೇಶಾನಂದ ಸ್ವಾಮೀಜಿ ಕರೆ ನೀಡಿದರು.

ರವಿವಾರ ಉಗಾರದ ಶ್ರೀ ಮಲ್ಲಿಕಾರ್ಜುನ ಗುರುದೇವ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯಪುರ ಜ್ಞಾನಯೋಗ ಆಶ್ರಮದ ಅಧ್ಯಕ್ಷರು ಹಾಗೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯ ಬಸವಲಿಂಗ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಅವರು ಮಾತನಾಡಿದರು.

ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳ ಆಶೀರ್ವಾದದಿಂದ ಆರಂಭವಾದ ಈ ಶಿಕ್ಷಣ ಸಂಸ್ಥೆಯಲ್ಲಿ ಕಳೆದ ೧೯ ವರ್ಷಗಳಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಇಲ್ಲಿಂದ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ಸೈನಿಕ, ಪೊಲೀಸ್ ಹಾಗೂ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಈ ವರ್ಷದಿಂದ ವಸತಿ ಶಾಲೆ ಹಾಗೂ ಗುರುಕುಲ ಶಿಕ್ಷಣ ವ್ಯವಸ್ಥೆ ಆರಂಭಿಸಲಾಗಿದ್ದು, ನವೋದಯ, ಸೈನಿಕ, ಮೊರಾರ್ಜಿ ಹಾಗೂ ಇತರ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ತಜ್ಞ ಶಿಕ್ಷಕರಿಂದ ವಿಶೇಷ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಊಟ, ವಸತಿ, ಕಂಪ್ಯೂಟರ್ ಶಿಕ್ಷಣ, ಗ್ರಂಥಾಲಯ, ಕ್ರೀಡಾ ಚಟುವಟಿಕೆಗಳು ಹಾಗೂ ನಿಸರ್ಗರಮ್ಯ ವಾತಾವರಣದಲ್ಲಿ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪರಮಪೂಜ್ಯ ಬಸವಲಿಂಗ ಸ್ವಾಮೀಜಿ ಮಾತನಾಡಿ, “ಸಿದ್ದೇಶ್ವರ ಮಹಾಸ್ವಾಮಿಗಳ ಆಶೀರ್ವಾದದಿಂದ ೨೦೦೭ರಲ್ಲಿ ಸಂಸ್ಥೆ ಆರಂಭಗೊಂಡಿದ್ದು, ಕೇವಲ ಪಠ್ಯ ಶಿಕ್ಷಣವಲ್ಲದೆ ಉತ್ತಮ ಸಂಸ್ಕಾರಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ರೂಪಿಸುವ ಕಾರ್ಯ ಮಾಡುತ್ತಿದ್ದೇವೆ” ಎಂದು ಹೇಳಿದರು.
ಆಶ್ರಮದ ವ್ಯವಸ್ಥಾಪಕ ರಾಜು ದಾನೊಳ್ಳಿ ಮಾಹಿತಿ ನೀಡಿ, ಎಲ್ಕೆಜಿಯಿಂದ ೧೦ನೇ ತರಗತಿವರೆಗೆ ಶಿಕ್ಷಣ ವ್ಯವಸ್ಥೆ ಇದ್ದು, ಕಳೆದ ೧೯ ವರ್ಷಗಳಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ದಾಖಲಾಗುತ್ತಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಗುರುಗಳಾದ ಶ್ರೀಶೈಲ್ ಪೂಜಾರಿ ಅವರ ಮೊಬೈಲ್ ಸಂಖ್ಯೆ ೭೮೯೯೫೪೫೦೦೮ ಅನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿಕ್ಷಣಪ್ರೇಮಿ ಲಕ್ಷ್ಮಣ ಹುಲ್ಲೋಳಿ, ಮುಖ್ಯಾಧ್ಯಾಪಕ ಹರೀಶ್ ಪರಿಟ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
