ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೊಳೆ ಗ್ರಾಮದ ಯುವಕರ ತಂಡ ಭಾರತದಲ್ಲೇ ಅತಿ ದೊಡ್ಡ ಡಾ. ಬಿ.ಆರ್. ಅಂಬೇಡ್ಕರ್ ಥ್ರೆಡ್ ಆರ್ಟ್ ನಿರ್ಮಿಸಿ ಹೊಸ ಸಾಧನೆ ಮಾಡಿದೆ. 26 ವರ್ಷದ ವಿನಾಯಕ ಶ್ರೀನಾಥ ಸುತಾರ ನೇತೃತ್ವದ 9 ಸದಸ್ಯರ ತಂಡದ ಈ ಕಲಾಕೃತಿ ಇದೀಗ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಪಾತ್ರವಾಗಿದೆ.


21×21 ಅಡಿ ಗಾತ್ರದ ಕಬ್ಬಿಣದ ಫ್ರೇಮ್ ಮೇಲೆ 40 ಸಾವಿರ ಮೀಟರ್ ಹತ್ತಿ ದಾರ ಬಳಸಿ ಈ ಬೃಹತ್ ಥ್ರೆಡ್ ಆರ್ಟ್ ನಿರ್ಮಿಸಲಾಗಿದೆ. ಸುಮಾರು ಮೂರು ದಿನಗಳ ಕಾಲ ನಿರಂತರವಾಗಿ ನಡೆದ ಕಾರ್ಯದಲ್ಲಿ 210 ಕೆಜಿ ಕಬ್ಬಿಣ, 300 ಸ್ಕ್ರೂಗಳು ಹಾಗೂ 48 ಮೀಟರ್ ಬಿಳಿ ಹತ್ತಿ ಬಟ್ಟೆ ಬಳಸಲಾಗಿದೆ. ಏಪ್ರಿಲ್ 13ರಂದು ಅಥಣಿ ಅಂಬೇಡ್ಕರ್ ವೃತ್ತದಲ್ಲಿ ಕಲಾಕೃತಿಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು.

ಗ್ರಾಮೀಣ ಭಾಗದ ಯುವಕರ ಪ್ರತಿಭೆಗೆ ರಾಜ್ಯದ ವಿವಿಧ ಭಾಗಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
