ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ಸಂಸ್ಕಾರದೊಂದಿಗೆ ಉತ್ತಮ ಶಿಕ್ಷಣ ಪಡೆದು ನಾಡಿಗೆ ಕೀರ್ತಿ ತರಬೇಕು. ನಿಮ್ಮ ತಂದೆ-ತಾಯಿಯರ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಿವಿ ಮಾತು ಹೇಳಿದರು.


ಅಥಣಿ ತಾಲೂಕಿನ ಕೃಷ್ಣ ರೈತ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ, ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 85 ಕ್ಕಿಂತ ಹೆಚ್ಚು ಅಂಕ ಗಳಿಸಿದ ಅಥಣಿ ತಾಲೂಕಿನ 2000ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಗೌರವಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸವದಿ, ಅವರು”ಹಿಂದೆ ಅಥಣಿ ತಾಲೂಕು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿತ್ತು. ಆ ಪರಿಸ್ಥಿತಿ ಮರುಕಳಿಸಬಾರದು ಎಂಬ ದೃಢ ನಿರ್ಧಾರದಿಂದ ತಾಲೂಕಿನಲ್ಲಿ 9 ಪ್ರೌಢಶಾಲೆಗಳು ಮತ್ತು 3 ಕಾಲೇಜುಗಳನ್ನು ತೆರೆಯಲಾಗಿದೆ. ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ 1ನೇ ತರಗತಿಯಿಂದಲೇ ಕೆಪಿಎಸ್ಸಿ (KPSC) ಮಾದರಿಯ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಪ್ರತಿಯೊಂದು ಗ್ರಾಮದಲ್ಲೂ ಗುಣಮಟ್ಟದ ಶಿಕ್ಷಣ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು,” ಎಂದು ಭರವಸೆ ನೀಡಿದರು.


ಕಟಗೇರಿ ಗ್ರಾಮದ ವಿದ್ಯಾರ್ಥಿನಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುವುದನ್ನು ಹಾಗೂ ಸವದಿ ಗ್ರಾಮದ ವಿದ್ಯಾರ್ಥಿ ಐಎಫ್ಎಸ್ (IFS) ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದನ್ನು ಶ್ಲಾಘಿಸಿದ ಅವರು, ಇಂತಹ ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗಲಿ ಎಂದರು. ವಿದ್ಯಾರ್ಥಿಗಳು ತಮಗೆ ಶಿಕ್ಷಣ ನೀಡಿದ ಗುರುಗಳು ಮತ್ತು ಪೋಷಕರ ಉಪಕಾರವನ್ನು ಎಂದಿಗೂ ಮರೆಯಬಾರದು ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶೇಗುಣಸಿಯ ವಿರಕ್ತ ಮಠದ ಡಾ. ಮಹಾಂತಪ್ರಭು ಸ್ವಾಮಿಗಳು ಮಾತನಾಡಿ, “ದೂರದೃಷ್ಟಿ ಮತ್ತು ಜನರ ಕಷ್ಟಗಳಿಗೆ ಸ್ಪಂದಿಸುವವರೇ ನಿಜವಾದ ನಾಯಕರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಸವದಿ ಅವರು ಜನಪರ ಕಾಳಜಿಯನ್ನು ಮೆರೆದಿದ್ದಾರೆ,” ಎಂದು ಗುಣಗಾನ ಮಾಡಿದರು. ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮಿಗಳು ಆಶೀರ್ವಚನ ನೀಡಿದರು.
ಅಮ್ಮಾಜೇಶ್ವರಿ ಮತ್ತು ಬಸವೇಶ್ವರ ನೀರಾವರಿ ಯೋಜನೆಗಳು ಪೂರ್ಣಗೊಂಡರೆ, ಅಥಣಿ ತಾಲೂಕು ಕಬ್ಬು ಬೆಳೆಯುವಿಕೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆಯಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ಮುಂದಿನ ವರ್ಷ 3000 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಗುರಿ ಹೊಂದಿರುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಯುವ ನಾಯಕ ಚಿದಾನಂದ ಸವದಿ ಸ್ವಾಗತಿಸಿದರು. ಶರಣಯ್ಯ ಭಂಡಾರಿ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶ್ರೀಶೈಲಿ ನಾರಗೊಂಡ, ಅಶೋಕ ಯಲ್ಲಡಗಿ, ಆನಂದ ದೇಶಪಾಂಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜಿ, ಅಮೋಘಸಿದ್ದ ಕೊಬ್ರಿ, ಸಿದ್ದಾರೂಢ ಸವದಿ, ಶಿವಕುಮಾರ್ ಸವದಿ, ರಾಮನಗೌಡ ಪಾಟೀಲ ಸೇರಿದಂತೆ ಹಲವು ಗಣ್ಯರು, ಶಿಕ್ಷಕರು, ಪೋಷಕರು ಮತ್ತು ಸಾವಿರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
