BELAGAVI

ಜಾಧವ್ ನಗರದ ನಿವಾಸಿಗಳಿಗೆ ಸಿಹಿ ಸುದ್ದಿ: 65 ಲಕ್ಷ ರೂ. ವೆಚ್ಚದ ಸುಸಜ್ಜಿತ ಉದ್ಯಾನವನಕ್ಕೆ ಚಾಲನೆ ನೀಡಿದ ಶಾಸಕ ಆಸೀಫ್ ಸೇಠ್

Share

ಬೆಳಗಾವಿಯ ಜಾಧವ್ ನಗರದ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಈಗ ಮುಹೂರ್ತ ಫಿಕ್ಸ್ ಆಗಿದೆ. ಶಾಸಕ ಆಸೀಫ್ ಸೇಠ್ ಅವರು 65 ಲಕ್ಷ ರೂಪಾಯಿ ವೆಚ್ಚದ ಸುಸಜ್ಜಿತ ಪಾರ್ಕ್ ನಿರ್ಮಾಣ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದು, ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಜಾಧವ್ ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಅತ್ಯಾಧುನಿಕ ಉದ್ಯಾನವನ ನಿರ್ಮಾಣಕ್ಕೆ ಶಾಸಕ ಆಸೀಫ್ ಸೇಠ್ ಅವರು ವಿಶೇಷ ನಿಧಿ ಅಡಿಯಲ್ಲಿ 65 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ. ಈ ಯೋಜನೆಯಡಿ ಈಗಿರುವ ಬಯಲು ಪ್ರದೇಶವನ್ನು ಸುಂದರವಾದ ಹಾಗೂ ಸುಸಜ್ಜಿತ ಉದ್ಯಾನವನವಾಗಿ ಪರಿವರ್ತಿಸಲಾಗುತ್ತಿದೆ. ಇದರಲ್ಲಿ ಸುಂದರವಾದ ನಡಿಗೆ ಹಾದಿ (ವಾಕಿಂಗ್ ಪಾಥ್), ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಹಚ್ಚ ಹಸಿರಿನ ಸಸ್ಯಕಾಶಿ, ಆಕರ್ಷಕ ದೀಪಾಲಂಕಾರ ಹಾಗೂ ಮಕ್ಕಳಿಗಾಗಿ ವಿಶೇಷ ಆಟದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಆಸಿಫ್ ಸೇಠ್ ಅವರು, “ನಗರ ಪ್ರದೇಶಗಳಲ್ಲಿ ಹಿರಿಯ ನಾಗರಿಕರು, ಮಕ್ಕಳು ಹಾಗೂ ಕುಟುಂಬದವರು ವಿಶ್ರಾಂತಿ ಪಡೆಯಲು ಸ್ವಚ್ಛ ಮತ್ತು ಹಸಿರಿನಿಂದ ಕೂಡಿದ ಸಾರ್ವಜನಿಕ ಸ್ಥಳಗಳ ಅವಶ್ಯಕತೆ ಇದೆ. ಈ ಉದ್ಯಾನವನವು ಕೇವಲ ಸೌಂದರ್ಯೀಕರಣಕ್ಕೆ ಸೀಮಿತವಾಗದೆ, ಜನರ ಆರೋಗ್ಯ ಮತ್ತು ಸಾಮಾಜಿಕ ಒಡನಾಟಕ್ಕೆ ಪೂರಕವಾಗಿರಲಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸ್ಥಳೀಯ ನಾಯಕರು ಹಾಗೂ ನಿವಾಸಿಗಳು ಉಪಸ್ಥಿತರಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Tags:

error: Content is protected !!