ಬೈಲಹೊಂಗಲ ತಾಲೂಕಿನ ಗದ್ದಿ ಕರವಿನಕೊಪ್ಪದಲ್ಲಿ ಇಂದು ನೂರಾರು ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಿ.ಎಸ್. ಯಡಿಯೂರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಈ ಉಚಿತ ಸಾಮೂಹಿಕ ವಿವಾಹ ಮಹೋತ್ಸವವು, ಆಡಂಬರದ ಮದುವೆಗಳ ನಡುವೆ ಸರಳತೆ ಮತ್ತು ಸಂಪ್ರದಾಯದ ಮಹತ್ವವನ್ನು ಸಾರುವಲ್ಲಿ ಯಶಸ್ವಿಯಾಯಿತು


ಅವರು ಇಂದು ಬೈಲಹೊಂಗಲ ತಾಲೂಕಿನ ಗದ್ದಿ ಕರವಿನಕೊಪ್ಪ ಕ್ರಾಸ್ ಬಳಿಯ ಬಿ.ಎಸ್. ಯಡಿಯೂರಪ್ಪ ಕಲ್ಯಾಣ ಮಂಟಪದಲ್ಲಿ ಸಮಾಜ ಸೇವಕ ಗುರುದೇವ ಪಾಟೀಲ ಅವರು ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನಂಬಿಕೆ, ಗೌರವ, ಹೊಂದಾಣಿಕೆ ಮತ್ತು ತ್ಯಾಗದ ಬುನಾದಿಯ ಮೇಲೆ ದಾಂಪತ್ಯ ಜೀವನ ನಡೆಸಿದರೆ ಅದು ಆದರ್ಶಮಯವಾಗಿರುತ್ತದೆ. ದಾಂಪತ್ಯ ಕೇವಲ ಇಬ್ಬರು ವ್ಯಕ್ತಿಗಳ ಬಂಧವಲ್ಲ, ಬದಲಾಗಿ ಎರಡು ಮನಸ್ಸುಗಳ ಸಮ್ಮಿಲನವಾಗಿದ್ದು, ಸಾರ್ಥಕ ಬದುಕಿಗೆ ಮತ್ತು ದಂಪತಿಗಳ ಏಳಿಗೆಗೆ ಅದು ಕಾರಣವಾಗುತ್ತದೆ. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂಬ ಶರಣರ ವಾಣಿಯಂತೆ ದಂಪತಿಗಳು ಪರಸ್ಪರ ಅನ್ಯೋನ್ಯತೆಯಿಂದ ಬದುಕಿದರೆ ಅದು ಪರಮಾತ್ಮನಿಗೂ ಪ್ರಿಯವಾಗುತ್ತದೆ ಎಂದು ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಿ.ಎಸ್. ಯಡಿಯೂರಪ್ಪ ಸುಪತ್ರಿ ಅರುಣದೇವಿ ಮಾತನಾಡಿ ಸದಾ ಸರಳತೆಗೆ ಹೆಸರುವಾಸಿಯಾಗಿದ್ದ ಯಡಿಯೂರಪ್ಪನವರ ಹೆಸರಿನಲ್ಲಿ ಪ್ರಾರಂಭವಾದ ಈ ಕಲ್ಯಾಣ ಮಂಟಪದಲ್ಲಿ ಅತ್ಯಂತ ಸರಳವಾಗಿ ಸಾಮೂಹಿಕ ವಿವಾಹ ಜರುಗುತ್ತಿರುವುದು ಅತ್ಯಂತ ಸಂತಸದ ವಿಷಯ. ವಿವಾಹ ವೆಂದರೆ ಅದ್ದೂರಿ ಮೆರವಣಿಗೆ, ಭೂರಿ ಭೋಜನ, ಡಾಲ್ಬಿ ಗಳಿಂದ ಸಂಗೀತ ಹೀಗೆ ಆಡಂಬರ ಎಂದು ಆಚರಿಸುವ ಈ ದಿನಮಾನದಲ್ಲಿ ಅತ್ಯಂತ ಸರಳಯುತವಾಗಿ ನಾಡಿನ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ವಿವಾಹ ಮಹೋತ್ಸವ ಜರುಗುತ್ತಿರುವುದು ಅನುಕರಣೀಯವಾದುದು ಮತ್ತು ಇದನ್ನು ಸಂಘಟಿಸಿದ ಗುರುದೇವ ನಿಂಗಣ್ಣಗೌಡ ಪಾಟೀಲರ ಕಾರ್ಯ ಶ್ಲಾಘನೀಯವಾದದ್ದು ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಅಂಕಲಗಿ ಅಡವಿ ಸಿದ್ದೇಶ್ವರ ಮಠದ ಅಮರಸಿದ್ಧೇಶ್ವರ ಮಹಾಸ್ವಾಮಿಗಳು , ಅರಳಿಕಟ್ಟಿ ವಿರಕ್ತಮಠದ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು ಅವರು ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದರು.
ವೇದಿಕೆಯ ಮೇಲೆ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಅಧ್ಯಕ್ಷತೆ ವಹಿಸಿದರು. ಮಾಜಿ ಶಾಸಕರಾದ ಅನಿಲ ಬೆನಕೆ, ಮಾಜಿ ಸಂಸದೆ ಮಂಗಲಾ ಅಂಗಡಿ, ಕಣಬರ್ಗಿಯ ಗುರು ಲೋಡಲೈನ್ಸ್ ಸಂಸ್ಥಾಪಕರಾದ ಗುರುದೇವ ನಿಂಗಣ್ಣಗೌಡ ಪಾಟೀಲ್ , ಸುಭಾಷ ಪಾಟೀಲ್ , ಶಿವಾಜಿ ಸುಂಟಕರ್ , ಲಕ್ಷ್ಮೀಅಕ್ಕ ವಿಕ್ರಂ ಇನಾಮಾದಾರ, ನಿವೃತ್ತ ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಅಭಿಯಂತರ ವಿರೂಪಾಕ್ಷ ಯಮಕನಮರಡಿ, ವಿದ್ಯಾ ಭಾರತಿ ಪ್ರಾಂತ ಸಂಯೋಜಕ ಪರಮೇಶ್ವರ ಹೆಗಡೆ, ಮಾಜಿ ಮಹಾಪೌರ ಎನ್.ಬಿ. ನಿರ್ವಾಣಿ,ಡಾ. ರವಿ ಪಾಟೀಲ, ಕಿರಣ ಜಾಧವ, ರತ್ನಪ್ರಭಾ ಬೆಲ್ಲದ, ಸುರೇಶ ಯಾದವ, ರಾಹುಲ್ ಗುರುದೇವ ಪಾಟೀಲ್ , ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
