yamakhanmardi

ಯಮಕನಮರಡಿ ಪೊಲೀಸರ ಭರ್ಜರಿ ಬೇಟೆ: ಬೈಕ್ ಕಳ್ಳರ ಬಂಧನ, 12 ಮೊಬೈಲ್‌ಗಳ ವಶ

Share

• ಯಮಕನಮರಡಿ ಪೊಲೀಸರಿಂದ ಬೈಕ್ ಕಳ್ಳರ ಬಂಧನ
• ಮೂವರು ಆರೋಪಿಗಳು ಈಗ ಪೊಲೀಸ್ ವಶ
• ಬರೋಬ್ಬರಿ 12 ಮೊಬೈಲ್ ಫೋನ್‌ಗಳ ಪತ್ತೆ
• ವಾರಸುದಾರರಿಗೆ ಮೊಬೈಲ್ ಹಸ್ತಾಂತರಿಸಿದ ಪೊಲೀಸ್ ಇಲಾಖೆ

ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸರ ಭರ್ಜರಿ ಕಾರ್ಯಾಚರಣೆಯ ಸುದ್ದಿ ಸದ್ದು ಮಾಡುತ್ತಿದೆ. ಕಳೆದುಹೋದ ಸಾರ್ವಜನಿಕರ ಸೊತ್ತುಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಬೈಕ್ ಕಳ್ಳರನ್ನು ಜೈಲಿಗಟ್ಟಿದ್ದಲ್ಲದೆ ಸಾವಿರಾರು ರೂಪಾಯಿ ಮೌಲ್ಯದ ಮೊಬೈಲ್‌ಗಳನ್ನು ವಾರಸುದಾರರಿಗೆ ಮರಳಿಸಿ ಶಹಬ್ಬಾಸ್‌ಗಿರಿ ಪಡೆದಿದ್ದಾರೆ.
ಯಮಕನಮರಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮೋಟಾರ್ ಸೈಕಲ್ ಕಳ್ಳತನ ಪ್ರಕರಣವನ್ನು ಭೇದಿಸಲಾಗಿದ್ದು, ಸಾರ್ವಜನಿಕರು ಕಳೆದುಕೊಂಡಿದ್ದ 12 ಮೊಬೈಲ್‌ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಹುಕ್ಕೇರಿ ತಾಲ್ಲೂಕಿನ ಹಂಚಿನಾಳ ಗ್ರಾಮದ ಈರಪಣಾ ಸಿದ್ದರಾಯಿ ರೇವಣ್ಣವರ ಎಂಬುವವರ ಮೋಟಾರ್ ಸೈಕಲ್ (KA23X812) ಕಳುವಾದ ಬಗ್ಗೆ ದಾಖಲಾಗಿದ್ದ ದೂರಿನನ್ವಯ (ಪ್ರಕರಣ ಸಂಖ್ಯೆ: 144/2026), ಪಿ.ಐ. ಜಾವೀದ ಮುಶಾಪುರಿ ನೇತೃತ್ವದ ವಿಶೇಷ ತಂಡವು ತನಿಖೆ ನಡೆಸಿ ಶಂಕರ ಭೀಮಾ ಆದಿನವರ, ಪರಶುರಾಮ ಕಲ್ಲಪ್ಪ ಶಿರಣಗಿ ಹಾಗೂ ಪರಶುರಾಮ ಭರಮಪ್ಪಾ ಪಾಂಡಿ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ಬೈಕ್ ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ CEIR ಪೋರ್ಟಲ್ ಬಳಸಿಕೊಂಡು ತಾಂತ್ರಿಕ ತನಿಖೆಯ ಮೂಲಕ ಪತ್ತೆಹಚ್ಚಲಾದ 12 ಮೊಬೈಲ್ ಫೋನ್‌ಗಳನ್ನು ಪಿ.ಐ. ಜಾವೀದ ಮುಶಾಪುರಿ ಅವರು ವಾರಸುದಾರರನ್ನು ಠಾಣೆಗೆ ಕರೆಸಿ ಅಧಿಕೃತವಾಗಿ ಹಸ್ತಾಂತರಿಸಿದರು. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಬಿ.ಕೆ.ಪಾಟೀಲ ಹಾಗೂ ಸಿಬ್ಬಂದಿಗಳಾದ ವಾಯ್.ಡಿ.ಗುಂಜಗಿ, ಜಿ.ಬಿ.ನಾಗನವರ ಮತ್ತು ಪಿ.ಕೆ.ಕಿಳ್ಳಿಕೇತರ ಅವರು ಸಕ್ರಿಯವಾಗಿ ಪಾಲ್ಗೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Tags:

error: Content is protected !!