ಖಾನಾಪುರ ತಾಲೂಕಿನ ಕುಸುಮಳ್ಳಿ ಗ್ರಾಮದಲ್ಲಿ ದಶಕಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನಿನ ಹಕ್ಕು ಪಡೆಯಲು ರೈತ ಸಂಘ ಜಿಲ್ಲಾಧಿಕಾರಿಗಳ ಮೊರೆ ಹೋಗಿದೆ. ಗೇಣಿದಾರರಾಗಿದ್ದರೂ ತಾಂತ್ರಿಕ ಕಾರಣಗಳಿಂದ ವಂಚಿತರಾದ ರೈತರಿಗೆ ಭೂ ಸುಧಾರಣಾ ಕಾಯಿದೆಯಡಿ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘದ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಇಂದು ಮಹತ್ವದ ಮನವಿ ಸಲ್ಲಿಸಲಾಯಿತು. ಖಾನಾಪುರ ತಾಲೂಕಿನ ಕುಸುಮಳ್ಳಿ ಗ್ರಾಮದ ಸರ್ವೆ ನಂ. 48ರ 13 ಎಕರೆ 21 ಗುಂಟೆ ಜಮೀನನ್ನು ರವಳು ಕಾಂತು ದೇಸಾಯಿ ಅವರ ಕುಟುಂಬವು 1957ರ ಪೂರ್ವದಿಂದಲೂ ಸಾಗುವಳಿ ಮಾಡುತ್ತಾ ಬಂದಿದೆ. ಆದರೆ, 1961ರ ಭೂ ಸುಧಾರಣಾ ಕಾಯಿದೆಯಡಿ ನಮೂನೆ-7 ಸಲ್ಲಿಸಲು ವಿಫಲರಾದ ಕಾರಣ, ಈವರೆಗೆ ಗೇಣಿ ಹಕ್ಕು ಪಡೆಯಲು ಸಾಧ್ಯವಾಗಿಲ್ಲ. ಪ್ರಸ್ತುತ ಈ ಜಮೀನನ್ನು ಅನಧಿಕೃತವಾಗಿ ಇತರರಿಗೆ ಮಾರಾಟ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ರೈತ ಸಂಘದ ಗಂಗಾಧರ ದೊಡಮನಿ ದೂರಿದ್ದಾರೆ. ಕರ್ನಾಟಕ ಭೂ ಸುಧಾರಣಾ ಕಾಯಿದೆ ಸೆಕ್ಷನ್ 77A ಅಡಿಯಲ್ಲಿ, ನಮೂನೆ-7 ಸಲ್ಲಿಸಲು ವಿಫಲರಾದ ಅರ್ಹ ಗೇಣಿದಾರರಿಗೆ ನಮೂನೆ-7A ಮೂಲಕ ಜಮೀನು ಮಂಜೂರು ಮಾಡಲು ಅವಕಾಶವಿದೆ. ಈ ಕಾಯಿದೆಯನ್ವಯ ರವಳು ಕಾಂತು ದೇಸಾಯಿ ಅವರಿಗೆ ಜಮೀನಿನ ಹಕ್ಕು ನೀಡಬೇಕು ಮತ್ತು ಜಮೀನಿನ ಮೂಲ ಮಾಲೀಕರ ವಾರಸುದಾರರ ಬಗ್ಗೆ ಸೂಕ್ತ ಪರಿಶೀಲನೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಉಪ ವಿಭಾಗಾಧಿಕಾರಿಗಳ ಹಳೆಯ ಆದೇಶಗಳನ್ನು ಪರಿಗಣಿಸಿ, ರೈತರಿಗೆ ನ್ಯಾಯ ಒದಗಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಸಂಘಟನೆ ಎಚ್ಚರಿಸಿದೆ. ಜಿಲ್ಲಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪ್ರದೀಪ್ ಭೂತಿಯಾ, ದಾದಾಪೀರ್ ಸಯ್ಯದ್, ಮಾರುತಿ ಹಿರೇಮಠ್, ಭಾರತ್ ಜೈನ್, ಮುಜಾಹಿದ್ ನದಾಫ್, ಪೀರಸಾಬ್ ನದಾಫ್, ಅವಿನಾಶ ಲೋಹಾರ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
