BELAGAVI

ಬೆಳಗಾವಿಯ ಐತಿಹಾಸಿಕ ಕಮಲ ಬಸದಿಯಲ್ಲಿ ಭಕ್ತಿ ಸಂಭ್ರಮ

Share

ಬೆಳಗಾವಿಯ ಕೋಟೆ ಆವರಣದಲ್ಲಿರುವ ಐತಿಹಾಸಿಕ ಕಮಲ ಬಸದಿಯು ಇಂದು ಧಾರ್ಮಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ. ಜೈನ ಸಮಾಜದ ವತಿಯಿಂದ ಧರ್ಮಚಕ್ರ ಆರಾಧನಾ ಮಹೋತ್ಸವದ ಅಂಗವಾಗಿ ನೂರಾರು ಬಾಲಕರಿಗೆ ಮೌಜಿ ಬಂಧನ ಅಂದರೆ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗುತ್ತಿದೆ.

ಬೆಳಗಾವಿಯ ಪ್ರಸಿದ್ಧ ಕಮಲ ಬಸದಿಯಲ್ಲಿ ಪೂಜ್ಯ ಶ್ರೀ 108 ಧರ್ಮಸೇನ ಮುನಿ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಧರ್ಮಚಕ್ರ ಆರಾಧನಾ ಮಹೋತ್ಸವ ಜರುಗುತ್ತಿದೆ. ಈ ಪವಿತ್ರ ಸಂದರ್ಭದಲ್ಲಿ ಬಾಲಕರ ಜೀವನದಲ್ಲಿ ಶಿಸ್ತು ಮತ್ತು ಸಂಸ್ಕಾರ ಮೂಡಿಸುವ ಉದ್ದೇಶದಿಂದ ಮೌಜಿ ಬಂಧನ ಸಾಮೂಹಿಕ ಉಪನಯನವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 150ಕ್ಕೂ ಹೆಚ್ಚು ಬಾಲಕರಿಗೆ ಅಷ್ಟಮೂಲ ಗುಣಗಳನ್ನು ಬೋಧಿಸಿ, ಉತ್ತಮ ಶ್ರಾವಕನನ್ನಾಗಿ ರೂಪಿಸುವ ನಿಟ್ಟಿನಲ್ಲಿ ಉಪನಯನ ಸಂಸ್ಕಾರ ಮಾಡಲಾಯಿತು. ಸಾಮಾನ್ಯವಾಗಿ ಹೆಚ್ಚಿನ ವೆಚ್ಚ ತಗುಲುವ ಈ ವಿಧಿಯನ್ನು ಅತ್ಯಲ್ಪ ಶುಲ್ಕದಲ್ಲಿ ನೆರವೇರಿಸಿರುವುದು ವಿಶೇಷವಾಗಿದೆ.

ಮಹೋತ್ಸವದ ಅಂಗವಾಗಿ ನಾಳೆ ಸಂಜೆ 4 ಗಂಟೆಗೆ ಕಮಲ ಬಸದಿಯಿಂದ ಧರ್ಮಚಕ್ರ ಆರಾಧನೆಯ ರಥೋತ್ಸವವು ವೈಭವದಿಂದ ಜರುಗಲಿದೆ. ಸುಮಾರು 2 ಕಿಲೋ ಮೀಟರ್ ದೂರದವರೆಗೆ ಸಾಗಲಿರುವ ಈ ರಥೋತ್ಸವದಲ್ಲಿ ಸಾವಿರಾರು ಶ್ರಾವಕ-ಶ್ರಾವಕಿಯರು ಭಾಗಿಯಾಗಲಿದ್ದಾರೆ ಎಂದು ಪತ್ರಿಕಾ ಪ್ರತಿನಿಧಿ ಪದ್ಮರಾಜ್ ವೈಜನ್ನವರ ‘ಇನ್ ನ್ಯೂಸ್’ಗೆ ಮಾಹಿತಿ ನೀಡಿದ್ದಾರೆ.
ದೀಕ್ಷೆ ಪಡೆದ ಬಾಲಕರು ಮತ್ತು ಅವರ ಕುಟುಂಬದವರಿಂದ ಕಮಲ ಬಸದಿಯ ಆವರಣದಲ್ಲಿ ಈಗ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಜೈನ ಧರ್ಮದ ಪರಂಪರೆಯನ್ನು ಎತ್ತಿ ಹಿಡಿಯಲಾಗುತ್ತಿದೆ.

Tags:

error: Content is protected !!