2020ರಲ್ಲಿ ಬೆಳಗಾವಿಯ ನೆಹರು ನಗರದಲ್ಲಿ ನಡೆದಿದ್ದ ಶಾಹಬಾಜ್ ಕೊಲೆ ಮತ್ತು ಅರ್ಫಾನ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣದ ತೀರ್ಪು ಇಂದು ಹೊರಬಿದ್ದಿದೆ. ಸುದೀರ್ಘ ವಿಚಾರಣೆ ನಡೆಸಿದ ಬೆಳಗಾವಿಯ ದ್ವಿತೀಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಾಲ್ವರು ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ

25-10-2020 ರಂದು ಬೆಳಗಾವಿಯ ನೆಹರು ನಗರದಲ್ಲಿ ನಡೆದ ಶಾಹಬಾಜ್ ಕೊಲೆ ಮತ್ತು ಮತ್ತೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ದ್ವೀತಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಿತು. ಪ್ರಕರಣದ ವಿಚಾರಣೆಯ ವೇಳೆ ಒಟ್ಟು 30 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿದ್ದು, 128ಕ್ಕೂ ಹೆಚ್ಚು ದಾಖಲೆಗಳನ್ನು ಸಲ್ಲಿಸಲಾಗಿತ್ತು. ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಧೀಶರಾದ ಗಂಗಾಧರ ಕೆ. ಅವರು ಆರೋಪಿಗಳಾದ ಲಕ್ಷ್ಮಣ್ ಫಕೀರಪ್ಪ ದಡ್ಡಿ, ಬಸವರಾಜ್ ಹೊಳೆಪ್ಪ ದಡ್ಡಿ, ಬಸವರಾಜ್ ಸಿದ್ರಾಯಿ ಸಿದ್ಧಪ್ಪ ನಾಯಕ್ ಮತ್ತು ನವೀನ ಸಿದ್ಧಪ್ಪ ದಡ್ಡಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 9 ಲಕ್ಷ 60 ಸಾವಿರ ರೂಪಾಯಿ ದಂಡವನ್ನು ವಿಧಿಸಿದ್ದಾರೆ. ದಂಡದಲ್ಲಿ 8 ಲಕ್ಷ ರೂಪಾಯಿ ಮೃತನ ತಂದೆ ತಾಯಿಗೆ ಮತ್ತು 1 ಲಕ್ಷ ರೂಪಾಯಿಯನ್ನು ದೂರುದಾರ ಅರ್ಫಾನ್’ನಿಗೆ ನೀಡಬೇಕೆಂದು ಆದೇಶಿಸಿದೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಭಾರತಿ ಹೊಸಮನಿ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು. ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಆರ್.ಎ. ಗಢಕರಿ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.
