• ಗೌನ್ ಧರಿಸಿದ್ದಕ್ಕೆ ಪತ್ನಿ ಮೇಲೆ ಬೆಂಕಿ
• ನಂದಗಡದಲ್ಲಿ ನಡೆದ ಅಮಾನುಷ ಕೃತ್ಯವಿದು ನೋಡಿ
• ಪತ್ನಿಯ ಸ್ಥಿತಿ ಗಂಭೀರ ಆಸ್ಪತ್ರೆಗೆ ದಾಖಲು
• ಕಿರಾತಕ ಪತಿ ಈಗ ಪೊಲೀಸ್ ವಶಕ್ಕೆ

ಮನೆಯಲ್ಲಿ ಪತ್ನಿ ಸೀರೆಯ ಬದಲಿಗೆ ಗೌನ್ ಧರಿಸಿದ್ದಕ್ಕೆ ವಾಗ್ವಾದ ನಡೆಸಿ, ಪತಿಯೇ ಪತ್ನಿಯ ಮೇಲೆ ಬೆಂಕಿ ಹಚ್ಚಿದ ಅಮಾನುಷ ಘಟನೆಯೊಂದು ನಂದಗಡದಲ್ಲಿ ನಡೆದಿದೆ.
ಖಾನಾಪೂರ ತಾಲೂಕಿನ ಹತ್ತರವಾಡ ಗ್ರಾಮದ ಕೃಷ್ಣಾಜಿ ಪಾಟೀಲ್ ಹಾಗೂ ಮಂಜುಳಾ ಎಂಬುವವರಿಗೆ ಎಂಟು ವರ್ಷಗಳ ಹಿಂದೆ ವಿವಾಹವಾಗಿತ್ತು. ಮದುವೆಯಾದಾಗಿನಿಂದಲೂ ಕೃಷ್ಣಾಜಿ ತನ್ನ ಪತ್ನಿಗೆ ದೈಹಿಕ ಹಾಗೂ ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದ ಎಂದು ಹೇಳಲಾಗಿದೆ.ಏಪ್ರಿಲ್ 19ರಂದು ನಂದಗಡದ ತಮ್ಮ ಬಾಡಿಗೆ ಮನೆಯಲ್ಲಿ ಪತ್ನಿ ಗೌನ್ ಧರಿಸುವ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಜಗಳ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಕೃಷ್ಣಾಜಿ, ಪತ್ನಿಯ ಮೇಲೆ ಬೆಂಕಿ ಹಚ್ಚಿದ್ದಾನೆ. ಘಟನೆಯನ್ನು ಗಮನಿಸಿದ ನೆರೆಹೊರೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪತ್ನಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
