• ಬಸವಣ್ಣನವರು ಜಗತ್ತು ಕಂಡ ಕ್ರಾಂತಿಕಾರಿ ಚಿಂತಕ
• ಶರಣರ ವಚನಗಳು ಇಂಗ್ಲಿಷ್‌ಗೆ ಅನುವಾದವಾಗಲಿ
• ಬಸವ ಮಂಟಪದಲ್ಲಿ ಅದ್ದೂರಿ ಬಸವ ಜಯಂತಿ
• ಸಮಾಜದ ಶಾಂತಿಗೆ ಬಸವ ತತ್ವವೇ ಆಧಾರ

ಬಸವಣ್ಣನವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಅತ್ಯಂತ ಅಗತ್ಯವಾದ ದಾರಿದೀಪಗಳಾಗಿವೆ. ಅವರು ಕೇವಲ ಒಂದು ಧರ್ಮದ ಸ್ಥಾಪಕರಲ್ಲ, ಬದಲಾಗಿ ಒಂದು ಕ್ರಾಂತಿಕಾರಿ ಚಿಂತಕರು. ಸಮಾನತೆಗಾಗಿ 12 ನೇ ಶತಮಾನದಲ್ಲಿ ಹೋರಾಟ ಮಾಡಿ, ಜಗಕ್ಕೆ ಬೆಳಕಾದವರೂ ಎಂದು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.
ಮಹಾಂತೇಶ ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ. ಬಸವಣ್ಣನವರು 12ನೇ ಶತಮಾನದಲ್ಲೇ ಮೌಢ್ಯಗಳ ವಿರುದ್ಧ ಹೋರಾಡಿದ್ದರು. ನಾವು ಕೂಡ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಾತಿ-ಧರ್ಮದ ಭೇದ ಮರೆತು ‘ಮನುಷ್ಯ ಧರ್ಮ’ವನ್ನು ಎತ್ತಿ ಹಿಡಿಯುವುದೇ ನಿಜವಾದ ಬಸವ ಜಯಂತಿ ಆಚರಣೆಯ ಉದ್ದೇಶ. ಆದ್ದರಿಂದ ರಾಷ್ಟ್ರೀಯ ಬಸವ ದಳವು ಬಸವಣ್ಣನವರ ಕ್ರಾಂತಿಕಾರಿ ವಿಚಾರಗಳನ್ನು ಮತ್ತು ಶರಣ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿ, ಬಸವಣ್ಣನವರ ವಚನಗಳನ್ನು ಕೇವಲ ಕನ್ನಡಕ್ಕೆ ಸೀಮಿತಗೊಳಿಸದೆ, ಇಂಗ್ಲಿಷ್, ಹಿಂದಿ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಯುವ ಪೀಳಿಗೆಗೆ ತಲುಪಿಸಬೇಕೆಂದು ಕರೆ ನೀಡಿದರು.
ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು, ಎಲ್ಲರೂ ನಮ್ಮವರೇ, ಎಲ್ಲರೂ ಒಂದೇ. ಯಾವುದೇ ಮೇಲು ಕೀಳುಗಳಿಲ್ಲ ಎಂಬ ಬಸವಣ್ಣನವರ ಸಂದೇಶವನ್ನು ಎಲ್ಲರೂ ಅರಿತು ಬಾಳಬೇಕು. ಇತ್ತಿಚೇಗೆ ದೇಶದಲ್ಲಿ ಜಾತಿ ಮತ ಧರ್ಮದ ಹೆಸರಿನಲ್ಲಿ ಒಡಕುಗಳು ಕಾಣಸಿಗುತ್ತಿವೆ. ಆದರೇ, ದೇಶದ ಅಖಂಡತೆಯಲ್ಲಿ ಬಸವಣ್ಣನವರ ವಚನಗಳು ಪ್ರಮುಖ ಪಾತ್ರ ವಹಿಸಿವೆ. ಬಸವ ತತ್ವಗಳನ್ನು ಎಲ್ಲರೂ ಅನುಸರಿಸಿಕೊಂಡು ಹೋಗಬೇಕೆಂದರು.
ರಾಷ್ಟ್ರೀಯ ಬಸವ ದಳವು ಕರ್ನಾಟಕದಲ್ಲಿ ಸುಮಾರು 1200 ಶಾಖೆಗಳನ್ನು ಹೊಂದಿದೆ. ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಹೈದ್ರಾಬಾದ್, ದೆಹಲಿಯಲ್ಲಿಯೂ ಸಂಘಟನೆಯೂ ಕಾರ್ಯರತವಾಗಿದೆ. ಪ್ರತಿ ವರ್ಷ ರಕ್ತದಾನ, ದೇಹದಾನ, ಸ್ಮಶಾನ ಸ್ವಚ್ಛತೆಯಂತ ವಿವಿಧ ಪಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಆನಂದ ಗುಡಸ ಹೇಳಿದರು.
ಶಂಕರ ಗುಡಸ ಅವರು ಶಾಸಕ ಆಸೀಫ್ ಸೇಠ್ ಅವರು 16 ಅಡಿ ಬಸವಣ್ಣನವರ ಮೂರ್ತಿ ನಿರ್ಮಾಣಕ್ಕೆ ಸಹಾಯ ಮಾಡಿದ ಹಿನ್ನೆಲೆ ಕೃತಜ್ಞತೆ ಸಲ್ಲಿಸಿದರು.
ಬೆಂಡಿಗೇರಿ ಅವರು ಕೂಡ ತಮ್ಮ ಅಭಿಪ್ರಾಯಗಳನ್ನು ತಿಳಿಸಿ, ಸಂಘಟನೆಯೂ ನಡೆದುಕೊಂಡು ಬಂದ ದಾರಿಯನ್ನು ನೆನಪಿಸಿ, ಅನಾಥ ಮಕ್ಕಳ ಸೇವೆಯನ್ನು ಮಾಡುವ ಪ್ರಯತ್ನವನ್ನು ಕೂಡ ಸಂಘಟನೆಯ ವತಿಯಿಂದ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಉಪ ಮಹಾಪೌರ ಹನುಮಂತ ಕೊಂಗಾಲಿ, ಅಶೋಕ ಬೆಂಡಿಗೇರಿ, ಶಂಕರ ಗುಡಸ, ಮಹಾಂತೇಶ ಗುಡಸ, ರತ್ನಾಪ್ರಭಾ ಬೆಲ್ಲದ,
ಬಸವರಾಜ ರೊಟ್ಟಿ, ಈರಣ್ಣ ದೆಯಣ್ಣನವರ, ರಮೇಶ ತುಬಚಿ, ಚಂದ್ರಶೇಖರ ಬೆಂಬಳಗಿ, ಸೂರ್ಯಕಾಂತ ಭಾವಿ, ಮನೋಹರ ಪುಡಕಲಕಟ್ಟಿ, ಮುರಗೇಂದ್ರಗೌಡ ಪಾಟೀಲ, ರಾಜಶೇಖರ ಡೋಣಿ, ಶ್ರೀಕಾಂತ ಪಾಟೀಲ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
