kagawad

ಶೇಡಬಾಳದ ಅಚ್ಚರಿ: ತ್ರಿಕಾಲ ನಂದಿ ಕಾವಲಿನಲ್ಲಿ ಸ್ವಯಂಭು; ಸಂತಾನ ಭಾಗ್ಯದ ಪವಿತ್ರ ಕ್ಷೇತ್ರವಿದು!

Share

• ಶೇಡಬಾಳದಲ್ಲಿ ಅಪರೂಪದ ತ್ರಿಕಾಲ ನಂದಿ ದರ್ಶನ
• ಚಾಲುಕ್ಯರ ವಾಸ್ತುಶಿಲ್ಪದ ಭವ್ಯ ಸ್ವಯಂಭು ಶಿವಾಲಯ
• ಸಂತಾನ ಭಾಗ್ಯಕ್ಕಾಗಿ ದಂಪತಿಗಳ ಹರಕೆ ಕೇಂದ್ರ
• ನಂದಿಗೆ ತೆಂಗಿನಕಾಯಿ ತೋರಣ ಕಟ್ಟುವ ಸಂಪ್ರದಾಯ

ಸಾಮಾನ್ಯವಾಗಿ ಶಿವಲಿಂಗದ ಮುಂದೆ ಒಂದು ನಂದಿ ಇರುವುದನ್ನು ನಾವು ನೋಡಿರುತ್ತೇವೆ. ಆದರೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಐತಿಹಾಸಿಕ ದೇಗುಲವೊಂದರಲ್ಲಿ ಏಕಕಾಲಕ್ಕೆ ಮೂರು ನಂದಿಗಳ ದರ್ಶನ ಪಡೆಯಬಹುದು! ಚಾಲುಕ್ಯರ ಕಾಲದ ಈ ಅದ್ಭುತ ವಾಸ್ತುಶಿಲ್ಪ ಹಾಗೂ ಭಕ್ತರ ನಂಬಿಕೆಯ ವಿಶೇಷ ವರದಿ ಇಲ್ಲಿದೆ.
ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿರುವ ‘ಸ್ವಯಂಭು ಶಿವಾಲಯ’ ತನ್ನದೇ ಆದ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯನ್ನು ಹೊಂದಿದೆ. 12ನೇ ಶತಮಾನದ ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯದಲ್ಲಿ ಶಿವಲಿಂಗದ ಎದುರು ‘ತ್ರಿಕಾಲ ನಂದಿ’ಗಳು ಕಾವಲಾಗಿ ನಿಂತಿರುವುದು ವಿಶೇಷ. ಸ್ಥಳೀಯವಾಗಿ “ಬಸವಣ್ಣನ ದೇವಸ್ಥಾನ”ವೆಂದೇ ಖ್ಯಾತಿ ಪಡೆದಿರುವ ಈ ಕ್ಷೇತ್ರದಲ್ಲಿ ಶಿವಲಿಂಗವು ಸ್ವಯಂಭು ಆಗಿರುವುದು ಭಕ್ತರ ಪಾಲಿಗೆ ಪರಮ ಪವಿತ್ರವಾಗಿದೆ. ಪ್ರತಿನಿತ್ಯ ಅಕ್ಕಿ ಅನ್ನದ ನೈವೇದ್ಯ ಹಾಗೂ ಬಿಲ್ವಪತ್ರೆಯ ಅರ್ಚನೆಯೊಂದಿಗೆ ಇಲ್ಲಿ ಭಕ್ತಿಪೂರ್ವಕ ಪೂಜಾ ಕೈಂಕರ್ಯಗಳು ನೆರವೇರುತ್ತವೆ.
ಈ ದೇವಾಲಯಕ್ಕೆ ಕೇವಲ ಧಾರ್ಮಿಕ ಅಷ್ಟೇ ಅಲ್ಲದೆ, ವಿಶೇಷ ನಂಬಿಕೆಯೂ ಬೆಸೆದುಕೊಂಡಿದೆ. ಸಂತಾನ ಭಾಗ್ಯವಿಲ್ಲದ ದಂಪತಿಗಳು ಇಲ್ಲಿನ ನಂದಿ ಮೂರ್ತಿಗಳಿಗೆ ತೆಂಗಿನಕಾಯಿ ತೋರಣ ಕಟ್ಟಿ ಹರಕೆ ಹೊತ್ತರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ಗಾಢ ನಂಬಿಕೆ ಇಲ್ಲಿದೆ. ಹರಕೆ ಈಡೇರಿದ ಮೇಲೆ ಭಕ್ತರು ಮತ್ತೆ ದೇವಸ್ಥಾನಕ್ಕೆ ಬಂದು ಕೃತಜ್ಞತೆ ಸಲ್ಲಿಸುವುದು ದಶಕಗಳಿಂದ ನಡೆದುಬಂದ ಸಂಪ್ರದಾಯ. ಇತಿಹಾಸದ ಸೊಗಡು ಮತ್ತು ಪವಾಡದ ಶಕ್ತಿಯನ್ನು ತನ್ನೊಳಗೆ ಅಡಗಿಸಿಕೊಂಡಿರುವ ಈ ತ್ರಿಕಾಲ ನಂದಿ ಕ್ಷೇತ್ರವು ಇಂದು ಭಕ್ತರ ನೆಚ್ಚಿನ ಆಧ್ಯಾತ್ಮಿಕ ಕೇಂದ್ರವಾಗಿ ಹೊರಹೊಮ್ಮಿದೆ.

Tags:

error: Content is protected !!