• ಮರ್ಯಾದಾ ಹತ್ಯೆಯ ಪ್ರಮುಖ ಆರೋಪಿಗಳು ಈಗ ಅಂದರ್
• ಸಹೋದರ, ಚಿಕ್ಕಪ್ಪ ಹಾಗೂ ಭಾವನೇ ಹಂತಕರು
• ವಿಷವಿಕ್ಕಿ ಕೊಂದಿದ್ದ ಕಿರಾತಕರಿಗೆ ಸಿಕ್ಕಿತು ಶಿಕ್ಷೆ
• ಯಮಕನಮರಡಿ ಪೊಲೀಸರಿಂದ ಚುರುಕಾದ ಕಾರ್ಯಾಚರಣೆ

ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಕ್ರಗತಿಯ ಕಾರ್ಯಾಚರಣೆ ನಡೆಸಿ ಯಮಕನಮರ್ಡಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಎಸ್ಪಿ. ಕೆ.ರಾಮರಾಜನ್ ಹೇಳಿದರು.
ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸತ್ಯವ್ವ ಸಂತೋಷ ಹೆಳವಿ (24) ಎಂಬಾಕೆಯನ್ನು ಆಕೆಯ ಕುಟುಂಬದವರೇ ವಿಷವಿಕ್ಕಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ಸುಟ್ಟು ಹಾಕಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಕೃಷ್ಣಾ ಸಹದೇವ ಪಾಟೀಲ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಕೃಷ್ಣಾ ಸಹದೇವ ಪಾಟೀಲ ಮತ್ತು ಮೃತ ಸತ್ಯವ್ವಾ ಸಂತೋಷ ಹೆಳವರ ಇಬ್ಬರು ಹುಕ್ಕೇರಿ ತಾಲೂಕಿನ ನದಿಗುಡಿಕೇತ್ರದವರು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಸತ್ಯವ್ವಾಳಿಗೆ ಸಂತೋಷ್ ಹೆಳವಿ ಎಂಬಾತನೊಂದಿಗೆ ಮದುವೆಯಾದರೂ ಇವರ ಪ್ರೀತಿ ಮುಂದುವರೆದಿತ್ತು. ಈ ಹಿನ್ನೆಲೆ ಸತ್ಯವ್ವ, ಕಳೆದ ಫೆಬ್ರವರಿ 17 ರಂದು ಆತನೊಂದಿಗೆ ಬೇರೆ ಮನೆ ಮಾಡಿ ಬೆಳವಡಿಯಲ್ಲಿ ವಾಸವಿದ್ದಳು. ಆದರೇ ತವರೂ ಮನೆಯವರು ಈ ಬಗ್ಗೆ ಯಮಕನಮರಡಿ ಮತ್ತು ರಾಯಬಾಗ ಠಾಣೆಗಳಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ವಿಷಯ ತಿಳಿದು ಆಕೆಯನ್ನು ಪತ್ತೆ ಹಚ್ಚಿ ಕರೆತಂದಿದ್ದ ಕುಟುಂಬಸ್ಥರು, ಜಾತಿ ಬೇರೆ ಎಂಬ ಕಾರಣಕ್ಕೆ ಬುದ್ಧಿವಾದ ಹೇಳಿದ್ದರೂ ಆದರೂ ಆಕೆ ಅವರ ಮಾತನ್ನು ಕೇಳಲಿಲ್ಲ. ಮಾರ್ಚ್ 21 ರಂದು ಸಾಂಗ್ಲಿ ಜಿಲ್ಲೆಯ ಅರಗ ಗ್ರಾಮದಲ್ಲಿದ್ದಾಗ ಸತ್ಯವ್ವ ಮತ್ತೆ ಪ್ರಿಯಕರನ ಬಳಿಯೇ ಹೋಗುವುದಾಗಿ ಪಟ್ಟು ಹಿಡಿದಿದ್ದಾಳೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಬಲವಂತವಾಗಿ ವಿಷ ಕುಡಿಸಿ ಆಕೆಯನ್ನು ಹತ್ಯೆ ಮಾಡಿದ್ದಾರೆ. ಅಂದೇ ರಾತ್ರಿ ಅರಗ ಗ್ರಾಮದ ಸ್ಮಶಾನದಲ್ಲಿ ಶವವನ್ನು ಸುಟ್ಟು ಹಾಕುವ ಮೂಲಕ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ. ಈ ಬಗ್ಗೆ ಕೃಷ್ಣಾ ಪಾಟೀಲ ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಯಮಕನಮರಡಿ ಪಿಐ ಜಾವೀದ ಎಫ್. ಮುಷಾಪುರಿ ಅವರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತಳ ಚಿಕ್ಕಪ್ಪ ಪ್ರಕಾಶ ಭೀಮಪ್ಪ ಹಳವರ (46), ಸಹೋದರ ಶಾನೂರ ಸದಾಶಿವ ಹಳವರ (35) ಮತ್ತು ಭಾವ ಕಲ್ಲಪ್ಪ ಮಾಯಪ್ಪ ಹಳವಿ (40) ಎಂಬುವವರನ್ನು ಬಂಧಿಸಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
