ಬೆಳಗಾವಿಯ ಐತಿಹಾಸಿಕ ಶಿವಜಯಂತಿ ಚಿತ್ರರಥೋತ್ಸವವನ್ನು ಸುಗಮವಾಗಿ ನಡೆಸಲು ಮಹಾನಗರ ಪಾಲಿಕೆ ಸಜ್ಜಾಗಿದೆ. ಮೆರವಣಿಗೆ ಮಾರ್ಗದಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ಕೋರಿ ಶಿವಜಯಂತಿ ಚಿತ್ರರಥ ಮಹಾಮಂಡಳವು ಪಾಲಿಕೆಗೆ ಮನವಿ ಸಲ್ಲಿಸಿದ್ದು, ಮೇಯರ್ ಹಾಗೂ ಉಪಮೇಯರ್ ಅವರು ಶೀಘ್ರವೇ ಸ್ಥಳ ಪರಿಶೀಲನೆ ನಡೆಸಲಿದ್ದಾರೆ.

ಏಪ್ರಿಲ್ 21ರಂದು ನಡೆಯಲಿರುವ ಭವ್ಯ ಶಿವಜಯಂತಿ ಚಿತ್ರರಥೋತ್ಸವದ ಹಿನ್ನೆಲೆಯಲ್ಲಿ, ಶಿವಜಯಂತಿ ಚಿತ್ರರಥ ಮಹಾಮಂಡಳದ ಪದಾಧಿಕಾರಿಗಳು ಸೋಮವಾರ ಮೇಯರ್ ಪ್ರೀತಿ ಕಾಮಕರ್ ಹಾಗೂ ಉಪಮೇಯರ್ ಹಣಮಂತ ಕೊಂಗಾಲಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಅಧ್ಯಕ್ಷ ಸುನೀಲ್ ಜಾಧವ್, ಸಾಹಿತಿ ಗುಣವಂತ್ ಪಾಟೀಲ್ ಹಾಗೂ ಪ್ರಸಾದ್ ಮೋರೆ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ಮೆರವಣಿಗೆ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ, ಕುಡಿಯುವ ನೀರು ಮತ್ತು ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಮಾಡುವಂತೆ ಆಗ್ರಹಿಸಲಾಯಿತು.
ರಾತ್ರಿ ಇಡೀ ನಡೆಯುವ ಮೆರವಣಿಗೆಯ ಕಾರಣ ಶಿವಭಕ್ತರಿಗಾಗಿ ಉಪಹಾರ ಗೃಹಗಳನ್ನು ತೆರೆಯಲು ಅನುಮತಿ ನೀಡಬೇಕು ಹಾಗೂ ಪೊಲೀಸ್, ಹೆಸ್ಕಾಂ, ಪಾಲಿಕೆ ಮತ್ತು ವೈದ್ಯಕೀಯ ತಂಡಗಳ ಸಮನ್ವಯಕ್ಕಾಗಿ ತುರ್ತು ಸಹಾಯ ಕೇಂದ್ರ ಸ್ಥಾಪಿಸಬೇಕು ಎಂದು ಚರ್ಚಿಸಲಾಯಿತು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮೇಯರ್ ಹಾಗೂ ಉಪಮೇಯರ್ ಅವರು, ಶೀಘ್ರವೇ ನಗರದ ಮೆರವಣಿಗೆ ಮಾರ್ಗವನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗೌರವಾನ್ವಿತ ಮೇಯರ್ ಪ್ರೀತಿ ಕಾಮಕರ್, ಉಪಮೇಯರ್ ಹಣಮಂತ ಕೊಂಗಾಲಿ, ಮಹಾಮಂಡಳದ ಅಧ್ಯಕ್ಷ ಸುನೀಲ್ ಜಾಧವ್, ಸಾಹಿತಿ ಗುಣವಂತ್ ಪಾಟೀಲ್, ಪ್ರಸಾದ್ ಮೋರೆ, ಗಣ್ಯರಾದ ಸಂತೋಷ್ ಪೇಡ್ನೇಕರ್, ಗಿರೀಶ್ ಧೋಂಗಡಿ, ಜಯತೀರ್ಥ ಸೌಂದತ್ತಿ, ಶ್ರೇಯಸ್ ನಾಕಾಡಿ ಹಾಗೂ ರಮೇಶ್ ಸೊಂಟಕ್ಕಿ ಸೇರಿದಂತೆ ಹಲವರು ಭಾಗವಹಿಸಿದ್ದರು.
