ಬೆಳಗಾವಿಯ ವಿಶ್ವವಿಖ್ಯಾತ ಶಿವಜಯಂತಿ ಚಿತ್ರರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಏಪ್ರಿಲ್ 21 ರಂದು ನಡೆಯಲಿರುವ ಈ ಭವ್ಯ ಮೆರವಣಿಗೆಯನ್ನು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಅಭೂತಪೂರ್ವವಾಗಿ ಆಚರಿಸಲು ಪ್ರತಿವರ್ಷದಂತೆ ಈ ಬಾರಿಯೂ ಏಪ್ರಿಲ್ 21 ರಂದು ಸಂಜೆ 6 ಗಂಟೆಗೆ ಶಿವಜಯಂತಿ ಚಿತ್ರರಥೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು.


ಧರ್ಮವೀರ ಸಂಭಾಜಿ ರಾಜೇ ಚೌಕ್‌ನಲ್ಲಿರುವ ಜತ್ತಿಮಠದಲ್ಲಿ ಜರುಗಿದ ಮಹಾಮಂಡಳದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಹಾಮಂಡಳದ ಅಧ್ಯಕ್ಷ ಸುನೀಲ್ ಜಾಧವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಆಡಳಿತ ಮಂಡಳಿಯ ಸೂಚನೆಗಳನ್ನು ಪಾಲಿಸಿ, ಯಾವುದೇ ವಿವಾದಗಳಿಗೆ ಆಸ್ಪದ ನೀಡದಂತೆ ಶಿಸ್ತುಬದ್ಧವಾಗಿ ಮೆರವಣಿಗೆ ನಡೆಸುವಂತೆ ವಿವಿಧ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ.
ಈ ವರ್ಷದ ವಿಶೇಷವೆಂದರೆ ಪ್ರಸಾದ್ ಮೋರೆ ಅವರ ಮಾರ್ಗದರ್ಶನದಲ್ಲಿ ‘ಅತ್ಯುತ್ತಮ ಚಿತ್ರರಥ ಸ್ಪರ್ಧೆ’ಯನ್ನು ಆಯೋಜಿಸಲಾಗಿದ್ದು, ವಿಜೇತ ಮಂಡಳಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗುವುದು. ಬೆಳಗಾವಿಯ ಶಿವಜಯಂತಿಗೆ ತನ್ನದೇ ಆದ ವಿಶೇಷ ಪರಂಪರೆಯಿದ್ದು, ಪ್ರತಿಯೊಬ್ಬ ಶಿವಭಕ್ತರು ಸಭ್ಯತೆಯಿಂದ ನಡೆದುಕೊಂಡು ಉತ್ಸವದ ಗರಿಮೆಯನ್ನು ಎತ್ತಿ ಹಿಡಿಯಬೇಕು ಎಂದು ಸಾಹಿತಿ ಗುಣವಂತ್ ಪಾಟೀಲ್ ಮನವಿ ಮಾಡಿದರು.
ಸಭೆಯಲ್ಲಿ ಮಹಾಮಂಡಳದ ಪದಾಧಿಕಾರಿಗಳು ಹಾಗೂ ನೂರಾರು ಶಿವಭಕ್ತರು ಭಾಗವಹಿಸಿ ಉತ್ಸವದ ಯಶಸ್ಸಿಗೆ ಸಂಕಲ್ಪ ಮಾಡಿದರು.
