ಬೆಳಗಾವಿ ನಗರದ ಹನುಮಾನ ನಗರದಲ್ಲಿ ಭಾನುವಾರ ಬೆಳಗ್ಗೆ ಬಿರ್ಲಾ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಆಯೋಜಿಸಲಾದ “ಬೇಲಾ ಸೂಪರ್ ಹೀರೋ ಫನ್ ರನ್” ಕಾರ್ಯಕ್ರಮವು ಸಂಭ್ರಮ, ಉತ್ಸಾಹ ಮತ್ತು ಬಣ್ಣಗಳ ಹಬ್ಬದಂತೆ ಕಂಗೊಳಿಸಿತು. ಪುಟಾಣಿ ಮಕ್ಕಳು ವಿವಿಧ ಸೂಪರ್ ಹೀರೋ ಹಾಗೂ ಪ್ರೇರಣಾದಾಯಕ ವ್ಯಕ್ತಿಗಳ ವೇಷಭೂಷಣ ತೊಟ್ಟು ಓಟದಲ್ಲಿ ಭಾಗವಹಿಸಿ ನೋಡುಗರ ಗಮನ ಸೆಳೆದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು ಚೋಟಾ ಭೀಮ್, ಸ್ಪೈಡರ್ ಮ್ಯಾನ್, ಬ್ಯಾಟ್ಮ್ಯಾನ್ ಸೇರಿದಂತೆ ಜನಪ್ರಿಯ ಕಾರ್ಟೂನ್ ಹಾಗೂ ಚಲನಚಿತ್ರ ಪಾತ್ರಗಳ ವೇಷ ತೊಟ್ಟಿದ್ದು ವಿಶೇಷವಾಗಿತ್ತು. ಜೊತೆಗೆ ಭಾರತೀಯ ಸೇನೆಯ ಸೈನಿಕರ ವೇಷಭೂಷಣ ತೊಟ್ಟ ಪುಟಾಣಿ ಮಕ್ಕಳು ದೇಶಭಕ್ತಿಯ ಸಂದೇಶವನ್ನು ಸಾರಿದರು. ಈ ಬಣ್ಣ ಬಣ್ಣದ ವೇಷಭೂಷಣಗಳು ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆಯಾಗಿದ್ದು, ಸ್ಥಳೀಯರ ಗಮನ ಸೆಳೆಯಿತು.
ಹೀರೋ ಫನ್ ರನ್ನಲ್ಲಿ ಮಕ್ಕಳು ಉತ್ಸಾಹಭರಿತವಾಗಿ ಓಡಿದ್ದು, ಒಬ್ಬರಿಗಿಂತ ಮತ್ತೊಬ್ಬರು ಚುರುಕಾಗಿ ಪುಟ್ಟ ಹೆಜ್ಜೆ ಹಾಕಿದ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪುಟಾಣಿ ಮಕ್ಕಳ ಚಪಲತೆ, ಆತ್ಮವಿಶ್ವಾಸ ಮತ್ತು ಹರ್ಷಭರಿತ ಮುಖಗಳು ಕಾರ್ಯಕ್ರಮದ ಹೈಲೈಟ್ ಆಗಿ ಹೊರಹೊಮ್ಮಿದವು.
ಕಾರ್ಯಕ್ರಮಕ್ಕೆ ಪೋಷಕರು, ಶಿಕ್ಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಕ್ಕಳಿಗೆ ಉತ್ತೇಜನ ನೀಡಿದರು. ಮಕ್ಕಳ ಪ್ರತಿಭೆಯನ್ನು ಕೊಂಡಾಡಿ ಚಪ್ಪಾಳೆ ತಟ್ಟಿದ ಪೋಷಕರ ಹರ್ಷೋದ್ಗಾರಗಳು ಸ್ಥಳದ ವಾತಾವರಣವನ್ನು ಮತ್ತಷ್ಟು ಉತ್ಸಾಹಭರಿತಗೊಳಿಸಿತು.

ಚಿಣ್ಣರಿಗೆ ಇದು ಹೇಳಿ ಮಾಡಿಸಿದ ಇವ್ಹೇಂಟ್ ಆಗಿದೆ. ಮೊದಲ ಬಾರಿ ಮಕ್ಕಳಿಗೆ ಇಷ್ಟವಾದ ಇಂತಹ ಇವ್ಹೇಂಟ್ ಆಯೋಜಿಸಿದ್ದು, ಮಕ್ಕಳು ಮತ್ತು ಪಾಲಕರಿಗೂ ಸಂತಸವನ್ನು ತಂದಿದೆ ಎಂದು ಪಾಲಕರು ತಮ್ಮ ಸಂತಸವನ್ನು ಇನ್ ನ್ಯೂಸ್’ನೊಂದಿಗೆ ಹಂಚಿಕೊಂಡರು.
ನಗರಸೇವಕ ಸಂದೀಪ್ ಜಿರಗ್ಯಾಳ್ ಅವರು ಮಕ್ಕಳಿಗೆ ಒಳ್ಳೆಯದನ್ನ ಮಾಡು ಎಂದರೇ ಮಾಡಲ್ಲ. ಪಾಲಕರೇ ಮೊದಲೂ ಅಂತಹ ರೂಢಿಯನ್ನ ಬೆಳೆಸಿಕೊಂಡರೇ, ಅದನ್ನ ನೋಡಿ ಮಕ್ಕಳು ಒಳ್ಳೆಯದನ್ನು ಕಲಿಯುತ್ತವೆ. ಇಂದಿನ ಮಕ್ಕಳೇ ನಾಳಿನ ಭಾರತದ ನಿರ್ಮಾತೃರಾಗಿದ್ದಾರೆ. ಅವರಿಗೆ ಪೂರಕ ವಾತಾವರಣವನ್ನು ನಿರ್ಮಿಸುವುದು ಪಾಲಕರ ಜವಾಬ್ದಾರಿಯಾಗಿದೆ. ಮಕ್ಕಳ ಹೆಸರಿನಲ್ಲಿ ಸಸಿಯನ್ನು ನೆಟ್ಟು ಭಾವಿ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡುವ ಕಾರ್ಯವನ್ನು ಮಾಡುವಂತೆ ಕರೆ ನೀಡಿದರು.
ಬೆಳಗಾವಿಯ ಇತಿಹಾಸದಲ್ಲೇ ಮೊದಲಬಾರಿ ಸ್ವಾಸ್ಥ್ಯಪೂರ್ಣ ಸಮಾಜಕ್ಕಾಗಿ ಬೇಲಾ ಮತ್ತು ಬಿರ್ಲಾ ಸ್ಕೂಲ್ ಈ ಉಪಕ್ರಮವನ್ನು ಆಯೋಜಿಸಿದೆ. ಈ ಉಪಕ್ರಮ ಕರ್ನಾಟಕದ ಪೊಲೀಸ್ ಮತ್ತು ಭಾರತೀಯ ಸೇನೆಗೆ ಸಮರ್ಪಿಸುತ್ತಿದೆ. ಫಿಟನೇಸ್ ಬಗ್ಗೆ ಜಾಗೃತಿ ಮೂಡಿಸುವುದೇ ಇದರ ಸದುದ್ಧೇಶವಾಗಿದೆ ಎಂದು ಜೀತೇಶ್ ಮೆಣಸೆ ತಿಳಿಸಿದರು.
ಮೊದಲಬಾರಿಗೆ ಬೆಳಗಾವಿಯಲ್ಲಿ ಬೆಲಾ ಮತ್ತು ಬಿರ್ಲಾ ಸ್ಕೂಲ್ ಸೂಪರ್ ಹೀರೋಗಳ ಹೆಸರಿನಲ್ಲಿ ಮ್ಯಾರಾಥಾನ್ ಆಯೋಜಿಸಿದ್ದು, ಚಿಣ್ಣರಲ್ಲಿ ಉತ್ಸಾಹವನ್ನು ಮೂಡಿಸಿದೆ ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಆರೋಗ್ಯಕರ ಜೀವನಶೈಲಿ, ವ್ಯಾಯಾಮದ ಮಹತ್ವ ಹಾಗೂ ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಜೊತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ, ಸೃಜನಾತ್ಮಕತೆ ಮತ್ತು ಸಾಮಾಜಿಕ ಭಾಗವಹಿಸುವಿಕೆ ಬೆಳೆಸುವತ್ತ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದು ಅಭಿಪ್ರಾಯಪಟ್ಟರು.
ಒಟ್ಟಾರೆ “ಬೇಲಾ ಸೂಪರ್ ಹೀರೋ ಫನ್ ರನ್” ಕಾರ್ಯಕ್ರಮವು ಮಕ್ಕಳ ಉತ್ಸಾಹ, ಪೋಷಕರ ಪ್ರೋತ್ಸಾಹ ಮತ್ತು ಸಂಭ್ರಮದ ವಾತಾವರಣದ ನಡುವೆ ಯಶಸ್ವಿಯಾಗಿ ನೆರವೇರಿತು.
