ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕೇಂದ್ರ ಸರ್ಕಾರದ ಮಹತ್ವದ ‘ಫಸಲ್ ಬಿಮಾ’ ಯೋಜನೆಗೆ ಕನ್ನ ಹಾಕಿರುವ ಬೃಹತ್ ಜಾಲವೊಂದು ಪತ್ತೆಯಾಗಿದೆ. ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬರೊಬ್ಬರಿ 30 ಕೋಟಿ ರೂಪಾಯಿ ವಂಚಿಸಿರುವ ಕಿಲಾಡಿಗಳ ವಿರುದ್ಧ ಇದೀಗ ಕಾನೂನು ಸಮರ ಆರಂಭವಾಗಿದ್ದು, ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಮುಧೋಳ ತಾಲೂಕಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕೋಟ್ಯಾಂತರ ರೂಪಾಯಿ ದುರ್ಬಳಕೆಯಾಗಿರುವುದು ಬೆಳಕಿಗೆ ಬಂದಿದೆ. ಪ್ರಭಾವಿಗಳಿಗೆ ಹೆದರಿ ಹೆಸರು ಹೇಳದ ವ್ಯಕ್ತಿಯೊಬ್ಬರು ಬರೆದ ಅನಾಮಧೇಯ ಪತ್ರದಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ತನಿಖೆ ನಡೆಸಿದಾಗ ಶಾಕಿಂಗ್ ಸತ್ಯ ಹೊರಬಿದ್ದಿದೆ. ರೈತರ ಬೆಳೆಗಳ ನಕಲಿ ಫೋಟೋ ಬಳಸಿ, ಬೆಳೆ ಬೆಳೆಯದಿದ್ದರೂ ವಿಮೆ ಹಣ ಪಡೆಯುವ ಮೂಲಕ 2020-21 ರಿಂದ ಈವರೆಗೆ ಸುಮಾರು 30,28,51,580 ರೂಪಾಯಿ ಮೊತ್ತದ ಬೃಹತ್ ವಂಚನೆ ನಡೆದಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಮುಧೋಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ದೊಡಮನಿ ಅವರು ದೂರು ನೀಡಿದ್ದು, ಒಟ್ಟು 11 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೆಟಗುಡ್ಡ ಗ್ರಾಮದ 7 ಜನರು ಹಾಗೂ ಯುನಿವರ್ಸಲ್ ಸೋಂಪು ಇನ್ಶೂರೆನ್ಸ್ ಕಂಪನಿಯ ನಾಲ್ವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಇನ್ಶೂರೆನ್ಸ್ ಕಂಪನಿಯ ಉದ್ಯೋಗಿಗಳಾದ ಯಶವಂತ, ರಾಕೇಶ್, ಪ್ರಕಾಶ ಮತ್ತು ಅನಿಲ್ ಅವರನ್ನ ಬಂಧಿಸಲಾಗಿದೆ. ಈ ಜಾಲದಲ್ಲಿ ಹಲವು ಸರ್ಕಾರಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಚುರುಕುಗೊಂಡಿದೆ.
