ಕಾಗವಾಡ ತಾಲೂಕಿನ ಮಂಗಸುಳಿ ಗ್ರಾಮದಲ್ಲಿ ಎಸ್‌ಸಿ-ಎಸ್‌ಟಿ ಸಮಾಜದ ಕುಂದುಕೊರತೆಗಳ ಕುರಿತು ಸಭೆ ಜರುಗಿತು. ಸಮಾಜದಲ್ಲಿ ಜಾತೀಯತೆ ನಿವಾರಣೆಗೆ ೧೨ನೇ ಶತಮಾನದಲ್ಲಿಯೇ ಬಸವಣ್ಣವರು ಶ್ರಮಿಸಿದ್ದರು. ಆ ಬಳಿಕ ಹಂತ ಹಂತವಾಗಿ ಬದಲಾವಣೆಗಳಾಗಿದ್ದರೂ, ಕೆಲವು ರೂಢಿ-ಪರಂಪರೆಗಳು ಇನ್ನೂ ಮುಂದುವರಿದಿವೆ. ಪ್ರಸ್ತುತ ಸರ್ಕಾರ ದಲಿತ ಸಮಾಜದ ಪರವಾಗಿ ಹಲವು ಕಾಯ್ದೆ-ಕಾನೂನುಗಳನ್ನು ಜಾರಿಗೆ ತಂದಿದ್ದು, ಅನೇಕ ಕಲ್ಯಾಣ ಯೋಜನೆಗಳನ್ನು ರೂಪಿಸಿದೆ. ಇದರ ಸದುಪಯೋಗವನ್ನು ಯುವಕರು ಪಡೆದುಕೊಳ್ಳಬೇಕು ಎಂದು ಅಥಣಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಹೇಳಿದರು.


ಶುಕ್ರವಾರ ಸಂಜೆ ಮಂಗಸುಳಿ ಗ್ರಾಮದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಂಜಯ ತಳವಲ್ಕರ್ ಅವರ ನೇತೃತ್ವದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಕುಂದುಕೊರತೆಗಳನ್ನು ಆಲಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಎಸ್‌ಸಿ-ಎಸ್‌ಟಿ ಸಮುದಾಯದ ಸಂರಕ್ಷಣೆಗೆ ಸರ್ಕಾರ ಜಾರಿಗೆ ತಂದಿರುವ ವಿವಿಧ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ರೀತಿ ಅಥಣಿ ಸಿಪಿಐ ಸಂತೋಷ್ ಹಳ್ಳೂರ್ ಮಾತನಾಡಿ, ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಎಸ್‌ಸಿ-ಎಸ್‌ಟಿ ಸಮಾಜದ ಬೇಡಿಕೆಗಳಿಗೆ ಸ್ಪಂದನೆ ದೊರೆಯುತ್ತಿದೆ. ಮಂಗಸುಳಿಯಲ್ಲಿ ದಲಿತ ಮುಖಂಡ ಸಂಜಯ ತಳವಲ್ಕರ್ ನೇತೃತ್ವದಲ್ಲಿ ಹಮ್ಮಿಕೊಂಡ ಈ ಸಭೆ ಮಾದರಿಯಾಗಿದೆ ಎಂದು ಹೇಳಿದರು.
ಕಾಗವಾಡ ತಹಶೀಲ್ದಾರ್ ರವೀಂದ್ರ ಹಾದಿಮನಿ ಮಾತನಾಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿನ ಹಕ್ಕು-ಕರ್ತವ್ಯಗಳನ್ನು ಸರಿಯಾಗಿ ಅರಿತುಕೊಂಡಿದ್ದರೆ, ಹಲವು ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬಹುದಿತ್ತು. ಸಮಸ್ಯೆಗಳು ಎಲ್ಲರಿಗೂ ಇರುತ್ತವೆ, ಆದರೆ ಕಾನೂನಾತ್ಮಕ ಮಾರ್ಗದಿಂದ ಪರಿಹಾರ ಹುಡುಕಬೇಕು ಎಂದು ಸಲಹೆ ನೀಡಿದರು. ತಾಲೂಕಿನಲ್ಲಿ ದಲಿತ ಸಮುದಾಯದ ಬೇಡಿಕೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿದ್ದು, ಸಮಸ್ಯೆ ಉಂಟಾದಲ್ಲಿ ತಕ್ಷಣ ಸಂಪರ್ಕಿಸುವAತೆ ಕರೆ ನೀಡಿದರು.
ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪಿ.ಎಸ್. ಪತ್ತಾರ್ ಸಂವಿಧಾನ ಪೀಠಿಕೆಯನ್ನು ಓದಿಸಿ, ಸಮಾಜಕ್ಕೆ ಲಭ್ಯವಿರುವ ಸೌಲಭ್ಯಗಳ ಕುರಿತು ವಿವರಿಸಿದರು. ಮಂಗಸುಳಿಯಲ್ಲಿ “ಭಗವಾನ್ ಬೋಧಿಸತ್ವ” ಹೆಸರಿನಲ್ಲಿ ಸಮಾಜಕ್ಕಾಗಿ ಖರೀದಿಸಿದ ಸ್ಥಳದ ಮೂರು ವರ್ಷದ ಲೆಕ್ಕಪತ್ರ ನೀಡಿದಲ್ಲಿ, ಸಮಾಜ ಕಲ್ಯಾಣ ಇಲಾಖೆಯಿಂದ ರೂ. ೨.೫೦ ಕೋಟಿ ಅನುದಾನ ನೀಡುವ ಭರವಸೆ ನೀಡಿದರು.
ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಅವರು ಬೆಂಗಳೂರಿನಲ್ಲಿ ಇದ್ದು, ಸಮಾಜದ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳಿಗೆ ರೂ. ೨.೫೦ ಕೋಟಿ ಅನುದಾನ ಮಂಜೂರು ಮಾಡುವ ಬಗ್ಗೆ ಸಿದ್ಧತೆ ವ್ಯಕ್ತಪಡಿಸಿರುವುದಾಗಿ ದಲಿತ ಮುಖಂಡ ಸಂಜಯ ತಳವಲ್ಕರ್ ತಿಳಿಸಿದರು.
ಸಭೆಗೆ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಾಮಚಂದ್ರನ ಆಗಮಿಸಲು ಸಾಧ್ಯವಾಗದೆ, ದೂರವಾಣಿ ಮೂಲಕ ಶುಭಾಶಯ ತಿಳಿಸಿ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹಾಗೂ ಶೀಘ್ರದಲ್ಲೇ ಮಂಗಸುಳಿ ಗ್ರಾಮಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಸಿಡಿಪಿಓ ರವೀಂದ್ರ ಗುದುಗೆನವರ್, ಕಾಗವಾಡ ಪಿಎಸ್‌ಐ ರಾಘವೇಂದ್ರ ಖೋತ್, ಅಥಣಿ ಪಿಎಸ್‌ಐ ಗುರುರಾಜ್ ಪತ್ತಾರ್, ಸಂತೋಷ್ ಜಿಂಜರ್ವಾಡ, ಪ್ರಶಿಕ್ಷಿತ ಪಿಎಸ್‌ಐ ರಮೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಪೂಜಾರಿ, ದಲಿತ ಸಂಘಟನೆಯ ಅಧ್ಯಕ್ಷ ಸಚಿನ್ ಪೂಜಾರಿ, ರವೀಂದ್ರ ಕಾಂಬಳೆ, ಬಜರಂಗ್ ಕಾಂಬಳೆ, ಪ್ರಥಮೇಶ್ ವಾಘೆ, ಮಲ್ಲೇಶ್ ವರಾಳೆ, ಮಹೇಶ್ ವರಾಳೆ, ಅನಿಶ್ಲ ಲೂಖಂಡ, ವಿನಾಯಕ್ ಜೋಗುದಂಡೆ, ವಿಷ್ಣು ಅದುಕೆ, ಗೋವಿಂದ ಭಂಡಾರೆ ರವೀಂದ್ರ ಕಾಂಬಳೆ, ಸದಾನಂದ ಕಾಂಬಳೆ ಸೇರಿದಂತೆ ಫಅನೇಕರು ಉಪಸ್ಥಿತರಿದ್ದರು.
