Bagalkot

ಪ್ರಸಾದದ ವಿಚಾರಕ್ಕೆ ರಜೆಯಲ್ಲಿದ್ದ ಯೋಧನ ಮೇಲೆ ಮಾರಣಾಂತಿಕ ಹಲ್ಲೆ!

Share

ದೇಶದ ಗಡಿ ಕಾಯುವ ಯೋಧನಿಗೂ ಈಗ ರಕ್ಷಣೆಯಿಲ್ಲದಂತಾಗಿದೆ. ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ತಾಲೂಕಿನ ನಂದಗಾವ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆಯ ವೇಳೆ ಪ್ರಸಾದದ ವಿಚಾರಕ್ಕೆ ಯೋಧನ ಮೇಲೆ ಭೀಕರ ಹಲ್ಲೆ ನಡೆದಿದ್ದು, ಸದ್ಯ ಯೋಧ ಆಸ್ಪತ್ರೆ ಪಾಲಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ತಾಲೂಕಿನ ನಂದಗಾವ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ ಯೋಧ ಶ್ರೀನಿವಾಸ್ ಗಸ್ತಿ ಅವರ ಮೇಲೆ ವಿಠ್ಠಲ ಮ್ಯಾಗಡಿ ಹಾಗೂ ಆತನ ಮಕ್ಕಳು ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗ್ರಾಮದ ಶ್ರೀ ದುರ್ಗಾದೇವಿ ಜಾತ್ರೆಯ ಸಂದರ್ಭದಲ್ಲಿ ಪ್ರಸಾದವನ್ನು ಕದಿಯುತ್ತಿದ್ದಾರೆ ಎಂದು ಯೋಧ ಶ್ರೀನಿವಾಸ್ ಪ್ರಶ್ನಿಸಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಆರಂಭವಾದ ವಾಗ್ವಾದ ವಿಕೋಪಕ್ಕೆ ತಿರುಗಿ, ವಿಠ್ಠಲ ಮ್ಯಾಗಡಿ ಮತ್ತು ಅವರ ಮಕ್ಕಳು ಯೋಧನ ಮೇಲೆ ಹಲ್ಲೆ ಮಾಡಿದ್ದಾರೆ.

ಪ್ರಸ್ತುತ ತೀವ್ರವಾಗಿ ಗಾಯಗೊಂಡಿರುವ ಯೋಧ ಶ್ರೀನಿವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಮಗೆ ನ್ಯಾಯ ಕೊಡಿಸುವಂತೆ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯೋಧನ ಪತ್ನಿ ಆಶಾ ಗಸ್ತಿ ಅವರು ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Tags:

error: Content is protected !!